ಚೆನ್ನಮ್ಮನ ಕಿತ್ತೂರು ಉತ್ಸವ ಅಕ್ಟೋಬರ್ 23ರಿಂದ 25ರವರೆಗೆ ನಡೆಯಲಿದೆ. ಕಿತ್ತೂರ ಉತ್ಸವವನ್ನು ದಸರಾ ಮಾದರಿಯಲ್ಲಿ ಆಚರಿಸಬೇಕು. ಉತ್ಸವಕ್ಕೆ ಮೇರಗು ತರಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಚಿವ ಸತೀಶ್ ಜಾರಿಹೊಳಿ ಹೇಳಿದ್ದಾರೆ.
ಕಿತ್ತೂರಿನಲ್ಲಿ ನಡೆದ ಉತ್ಸವದ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಸಭೆಯಲ್ಲಿ ಅವರು ಮಾತನಾಡಿದರು. “ಕಿತ್ತೂರು ಅಭಿವೃದ್ಧಿಗಾಗಿ ಐದು ಕೋಟಿ ಅನುದಾನ ನೀಡಲಾಗವುದು. ಇದರಿಂದ ಕಿತ್ತೂರಿನ ಸಮಗ್ರ ಅಭಿವೃದ್ಧಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವ ಚಿತ್ರ, ರಸ್ತೆ, ಶೌಚಾಲಯ ನಿರ್ಮಾಣ ಸೇರಿದಂತೆ ಇತರ ನಿರ್ಮಾಣ ಕಾರ್ಯಗಳನ್ನು ಮಾಡಲಾಗುವುದು” ಎಂದು ಹೇಳಿದರು.
“ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ, ನಿರೂಪಕರಿಗೆ ಆಧ್ಯತೆ ನೀಡಬೇಕು. ಪ್ರತಿ ವರ್ಷ ಅದೇ ಕಲಾವಿದರು ಹಾಗೂ ಕಲಾತಂಡಗಳಿಗೆ ಅವಕಾಶ ಕೊಡಬಾರದು. ಒಮ್ಮೆ ಅವಕಾಶ ಸಿಕ್ಕವರಿಗೆ ಮತ್ತೆ ಎರಡು ವರ್ಷ ಬಿಟ್ಟು ಕೊಡಬೇಕು. ಇದರಿಂದ ಹೊಸ ಕಲಾವಿದರಿಗೂ ಅವಕಾಶ ಸಿಗುತ್ತದೆ. ಪ್ರದರ್ಶನ ನೀಡುವ ಯಾವುದೇ ಕಲಾವಿದರಿಗೆ ಶಾಸಕರ ಅಥವಾ ಇತರರ ಪತ್ರ ತೆಗೆದುಕೊಂಡು ಬನ್ನಿ ಎಂದು ಸೂಚಿಸುವುದು ಬೇಡ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಣ್ಣ ನೀರಾವರಿ ಇಲಾಖೆಯಿಂದ ಐತಿಹಾಸಿಕ ‘ರಣಗಟ್ಟಿ ಕೆರೆʼ ಅಭಿವೃದ್ಧಿ ಮಾಡಲಾಗುವುದು” ಎಂದರು.
ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ್ ಮಾತನಾಡಿ, “ಕೋಟೆಯ ಆವರಣದಲ್ಲಿ ಮಾಹಿತಿ ಫಲಕಗಳ ಅಳವಡಿಕೆ ಮಾಡುವುದರ ಜತೆಗೆ, ಧ್ವನಿ-ಬೆಳಕು ಕಾರ್ಯಕ್ರಮವನ್ನು ವಾರದಲ್ಲಿ ಕನಿಷ್ಠ ಎರಡು ಬಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಸ್ಥಳಿಯ ಕಲಾವಿದರಿಗೆ ಆಧ್ಯತೆ ನೀಡಲಾಗುವುದು” ಎಂದು ಹೇಳಿದರು.
“ಕಿತ್ತೂರು ಉತ್ಸವದ ಅಂಗವಾಗಿ ಹೊರಡುವ ವಿಜಯ ಜ್ಯೋತಿಯು, ಕಿತ್ತೂರು ಕರ್ನಾಟಕ ವ್ಯಾಪ್ತಿಯ ಎಲ್ಲ ತಾಲ್ಲೂಕುಗಳಿಗೆ ಹಾಗೂ ಪ್ರವಾಸಿ ತಾಣಗಳಲ್ಲಿ ಸಂಚರಿಸಲಿದೆ” ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದರು.
ಸಭೆಯಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಹರ್ಷಲ್ ಬೋಯರ್, ಎ.ಸಿ ಪ್ರಭಾವತಿ ಪಕೀರಪುರ, ಜಿಲ್ಲಾ ಪೊಲೀಸ್ ವರಿಷ್ಠ ಭೀಮಾಶಂಕರ ಗುಳೇದ, ಡಿವೈಎಸ್‌ಪಿ ರವಿ ನಾಯ್ಕ್, ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು.