ರಾಮನಗರದ ಹೊರವಲಯದ ದ್ಯಾವರಸೇಗೌಡನ ದೊಡ್ಡಿ ಸೇತುವೆ ಬಳಿ ಅರ್ಕಾವತಿ ನದಿಗೆ ದುಷ್ಕರ್ಮಿಗಳು ಅವಧಿ ಮೀರಿದ ಮಾತ್ರೆಗಳನ್ನು ಸುರಿದು ಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಲೇ ಮಾತ್ರೆ ರಾಶಿಯನ್ನು ತೆರವುಗೊಳಿಸಿದ್ದಾರೆ.
ಜಲಮಂಡಳಿ ಎಂಜಿನಿಯರ್ ಅನಿಲ್ ಅವರು ನೀರಿನ ಮಟ್ಟ ಪರಿಶೀಲಿಸಲು ನದಿ ಬಳಿಗೆ ಬಂದಿದ್ದರು. ಆ ವೇಳೆ ಆರೇಳು ಬಾಕ್ಸ್‌ಗಳಲ್ಲಿ ನದಿಗೆ ತಂದು ಎಸೆದು ಹೋಗಿದ್ದ ಮಾತ್ರೆ ರಾಶಿ ಗಮನಿಸಿ ತಕ್ಷಣ ನಗರಸಭೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ನಗರಸಭೆ ಉಪಾಧ್ಯಕ್ಷ ಸೋಮಶೇಖರ್ ಮಣಿ, ಪರಿಸರ ಎಂಜಿನಿಯರ್ ಸುಬ್ರಹ್ಮಣ್ಯ, ಆರೋಗ್ಯ ನಿರೀಕ್ಷಕ ವಿಜಯಕುಮಾರ್, ತಾಲೂಕು ಆರೋಗ್ಯಾಧಿಕಾರಿ ಉಮಾ ಹಾಗೂ ಇತರರು ಭೇಟಿ ನೀಡಿ ಮಾತ್ರೆಗಳನ್ನು ಪರಿಶೀಲಿಸಿದ್ದಾರೆ. ಬಳಿಕ ತಕ್ಷಣವೇ ಪೌರ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿ, ಮಾತ್ರೆಗಳನ್ನು ತೆರವುಗೊಳಿಸಿದ್ದಾರೆ.
“ಹಲವು ಕಂಪನಿಗಳ ಎಲ್ಲ ಮಾತ್ರೆಗಳು ಚೀಲದಲ್ಲಿದ್ದವು. ಅವೆಲ್ಲವೂ ಅವಧಿ ಮುಗಿದಿದ್ದು, ಪ್ಯಾಕಿಂಗ್ ಆಗಿದ್ದರಿಂದ ಇನ್ನೂ ನೀರಿನಲ್ಲಿ ಕರಗಿರಲಿಲ್ಲ. ಅಧಿಕಾರಿ ತೋರಿದ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದ್ದು, ಸಾರ್ವಜನಿಕರು ನದಿಗೆ ಯಾವುದೇ ವಸ್ತುಗಳನ್ನು ಎಸೆಯಬಾರದು. ಇದರಿಂದ ಅದೇ ನೀರನ್ನು ಬಳಸುವವರಿಗೆ ತೊಂದರೆಯಾಗುತ್ತದೆ” ಎಂದು ಸೋಮಶೇಖರ್ ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅನುದಾನ ಮಂಜೂರಾದರೂ ಅಂಗನವಾಡಿ ಕಟ್ಟಡಕ್ಕಿಲ್ಲ ನಿರ್ಮಾಣ ಭಾಗ್ಯ
“ಅರ್ಕಾವತಿ ನದಿಯಲ್ಲಿ ಸಿಕ್ಕಿರುವ ಅವಧಿ ಮೀರಿದ ಮಾತ್ರೆಗಳ ಚೀಲದ ಮೇಲೆ ಐಜೂರು ಬಡಾವಣೆಯ ಧ್ರುವ ಮೆಡಿಕಲ್ ಸ್ಟೋರ್ ಹೆಸರು ಇರುವುದು ಪತ್ತೆಯಾಗಿದೆ. ಆತನೇ ಕೃತ್ಯ ಎಸಗಿರುವ ಅನುಮಾನವಿದೆ. ಈ ಕುರಿತು ನಗರಸಭೆ ಪೌರಾಯುಕ್ತರು ನೀಡಿದ ದೂರಿನ ಮೇರೆಗೆ ಮೆಡಿಕಲ್ ಮಾಲೀಕನಿಗೆ ನೊಟೀಸ್ ನೀಡಲಾಗುವುದು. ಜೊತೆಗೆ ಪೊಲೀಸ್ ಠಾಣೆಗೂ ದೂರು ನೀಡಲಾಗುವುದು” ಎಂದು ಜಿಲ್ಲಾ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ನಿಯಂತ್ರಕಿ ಮಮತಾ ಅವರು ತಿಳಿಸಿದ್ದಾರೆ.