- ನಮ್ಮ ಹಾಗೂ ಅವರ ಕಾರ್ಯಕರ್ತರಿಗೆ ಹೊಂದಾಣಿಕೆ ಆಗಲ್ಲ
- ಕಾಂಗ್ರೆಸ್ ಜೊತೆಗೂ ಜೆಡಿಎಸ್ ಜೊತೆ ಮೈತ್ರಿ ನೋಡಿದ್ದೇನೆ
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ವೈಯಕ್ತಿಕವಾಗಿ ನನ್ನ ವಿರೋಧವಿದೆ. ಯಾವತ್ತೂ ಕೂಡ ನಮ್ಮ ಹಾಗೂ ಅವರ ಕಾರ್ಯಕರ್ತರಿಗೆ ಹೊಂದಾಣಿಕೆ ಆಗಲ್ಲ ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ತಿಳಿಸಿದರು.
ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, “ಕಾಂಗ್ರೆಸ್-ಜೆಡಿಎಸ್ ಜೊತೆ ಮೈತ್ರಿ ನೋಡಿದ್ದೇನೆ. ಬಿಜೆಪಿ ಜೊತೆಗೂ ನೋಡಿದ್ದೇನೆ. ಕಾಂಗ್ರೆಸ್‌ಗೆ ಜೆಡಿಎಸ್ ಮೊದಲಿನಿಂದಲೂ ವಿರೋಧ ಇದೆ” ಎಂದರು.
“ಜೆಡಿಎಸ್‌ನಲ್ಲಿ ಮಾನಸಿಕವಾಗಿ ಕಿರುಕುಳ ಇದೆ. ಅಧಿಕೃತವಾಗಿ ಮೈತ್ರಿಯಾದ ಬಳಿಕ ನನ್ನ ಮುಂದಿನ ನಿರ್ಧಾರ ಮಾಡುವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಆ ಸಂದರ್ಭದಲ್ಲಿ ಒಂದು ಪಕ್ಷದ ಮತದಾರರು ಮೈತ್ರಿ ಅಭ್ಯರ್ಥಿಗಳಿಗೆ ಪರಸ್ಪರ ಮತ ಹಾಕಲಿಲ್ಲ. ಆದರೆ ಯಾರೂ ಕೂಡ ಈ ಬಗ್ಗೆ ವೈಯಕ್ತಿಕವಾಗಿ ಮಾತನಾಡುತ್ತಿಲ್ಲ” ಎಂದು ಹೇಳಿದರು.
“ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಎಲ್ಲರಿಗೂ ಅಸಮಾಧಾನ ಇದೆ. ಆದರೆ ಈ ಕುರಿತಾಗಿ ನಮ್ಮ ಪಕ್ಷದಲ್ಲಿ ಯಾರನ್ನೂ ಕರೆದು ಚರ್ಚೆ ಮಾಡಿಲ್ಲ. ನನ್ನ ಕ್ಷೇತ್ರ ಅಷ್ಟೇ ಅಲ್ಲ, ಆರ್. ಅಶೋಕ್, ಮುನಿರತ್ನ, ದಾಸರಹಳ್ಳಿ ಕ್ಷೇತ್ರಗಳಲ್ಲೂ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಮೈತ್ರಿ ಬಳಿಕ ಪಕ್ಷದಲ್ಲಿ ಉಳಿಯಬೇಕೋ ಅಥವಾ ಬೇಡವೋ ಎಂಬುದು ನಿರ್ಧರಿಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಎಂಎಲ್‌ಎ ಟಿಕೆಟ್ ವಂಚನೆ | ಹಾಲಶ್ರೀ ಟೀಮ್‌ನ ಮತ್ತೊಂದು ಭಾನಗಡಿ ಬಯಲು
“ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ನಮಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ ಹಾಗೆಯೇ ಆಗಿತ್ತು. ನಾವು ಹೊರಗಡೆ ಬಂದ ಉದ್ದೇಶ ಏನು? ರಾಹುಲ್ ಗಾಂಧಿ ಮತ್ತು ದೇವೇಗೌಡರ ನೇತೃತ್ವದಲ್ಲಿ ಅಂದು ಚುನಾವಣೆ ಮಾಡಿದ್ರು. ನಾವು ನಾವು ಒಂದಾಗಬಹುದು. ಆದರೆ ಕೆಳಮಟ್ಟದ ಕಾರ್ಯಕರ್ತರಿಗೆ ಹಿಂಸೆಯಾಗಿದೆ” ಎಂದು ಹೇಳಿದರು.
“ನಮಗೆ ಹೈಕಮಾಂಡ್ ಅಂದರೆ ಯಡಿಯೂರಪ್ಪ. ನಾನು ಹೇಳುವವರೆಗೂ ಏನೂ ಮಾಡಬೇಡಿ ಅಂತ ಅವರು ಹೇಳಿದ್ದಾರೆ. ಅದಕ್ಕೆ ನಾನೆಲ್ಲೂ ಒಂದು ತಿಂಗಳಿಂದ ಏನು ಮಾತನಾಡಿಲ್ಲ. ಅವರು ಏನೋ ಹೇಳಿದ್ದಾರೆ, ಹಾಗಾಗಿ ಅಲ್ಲಿಯವರೆಗೂ ಮಾತನಾಡಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳಲ್ಲ” ಎಂದು ಸ್ಪಷ್ಟಪಡಿಸಿದರು.