‘ನಿಜ’ದ ನಿತ್ಯಹತ್ಯೆಯ ದುರುಳ ಕಾಲದಲ್ಲಿ ‘ಬಸವರಾಜುಪ್ರಜ್ಞೆ’ಯ ಎಚ್ಚರ

Date:

Advertisements

ಸಿದ್ದರಾಮನ ನಿಜ ವಚನಗಳ ನಿಕಷಕ್ಕೆ ಶಾಸನಗಳನ್ನು ಬಳಸುವ ತಮ್ಮ ಪ್ರಯತ್ನಕ್ಕೆ ಮಠಮಾನ್ಯಗಳಿಂದ, ಪುರೋಹಿತಶಾಹಿ ಸ್ವಾಮಿಗಳಿಂದ ವಿರೋಧ ಬಂದಾಗ ಅದನ್ನು ಎಲ್ ಬಸವರಾಜು ಅವರು ತಮ್ಮ ಕೆಲಸದ ಮೂಲಕವೇ ದಿಟ್ಟವಾಗಿ ಎದುರಿಸಿದರು. ಎಲ್‌ಬಿ ಅವರ ನಿಜದ ಹುಡುಕಾಟ ಮನುಷ್ಯ ಸಮಾಜದ ಆರೋಗ್ಯದ ಹಿನ್ನೆಲೆಯಲ್ಲಿ ಬಹಳ ದೊಡ್ಡ ಮೌಲ್ಯದ್ದಾಗಿದೆ. ಅ. 5 ಡಾ.ಎಲ್ ಬಸವರಾಜು ಅವರ ಜನ್ಮದಿನ. ಅವರ ಕುರಿತು ಡಾ.ಸರ್ಜಾಶಂಕರ ಹರಳಿಮಠ ಅವರ ವಿಶೇಷ ಲೇಖನ.

ನಮ್ಮ ಜಡ್ಡುಗೊಂಡ ಸಮಾಜಕ್ಕೆ ವೈಚಾರಿಕ ಶಾಕ್ ಟ್ರೀಟ್‌ಮೆಂಟ್ ನೀಡಿ ಅದರ ಚಲನಶೀಲತೆಗೆ ಕಾರಣವಾಗಿದ್ದು ವಚನ ಚಳವಳಿ. ಅದುವರೆಗೂ ಕುಟುಂಬಕ್ಕಷ್ಟೇ ಸೀಮಿತವಾಗಿದ್ದ ಮಹಿಳೆ ಸಾರ್ವಜನಿಕವಾಗಿ ತನ್ನ ದನಿಯನ್ನು ಮೊಳಗಿಸಿದ್ದು ಈ ಚಳವಳಿ ಅವರಲ್ಲಿ ತುಂಬಿದ ಆತ್ಮವಿಶ್ವಾಸದಿಂದಾಗಿ; ಮಹಿಳೆಯರಷ್ಟೇ ಅಲ್ಲದೆ ಅದುವರೆಗೂ ಅವಕಾಶವಂಚಿತರಾಗಿದ್ದ ಕೆಳಸಮುದಾಯದವರಿಗೂ ಕೂಡ. ಹನ್ನೆರಡನೆಯ ಶತಮಾನದವರೆಗೂ ಕೇವಲ ಒಂದೆರೆಡು ಜಾತಿಧರ್ಮಗಳ ಜನರಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣ ಮತ್ತು ಸಾಹಿತ್ಯಕ್ಷೇತ್ರ ಸಕಲೆಂಟು ಜಾತಿಗಳಿಗೂ ಹಬ್ಬಿತು. ಶಿಕ್ಷಣದ ಸಂಪರ್ಕ ವಾಸ್ತವವನ್ನು ಅರ್ಥ ಮಾಡಿಕೊಳ್ಳಲು ಕೆಳಜಾತಿಗಳಿಗೆ ಅವಕಾಶ ಕಲ್ಪಿಸಿತು. ಜಾತಿಯ ಹೆಸರಿನಲ್ಲಿ ತಮ್ಮ ಮೇಲಾಗುತ್ತಿದ್ದ ಅನ್ಯಾಯ ಶೋಷಣೆಯನ್ನು ಜನ ಅರ್ಥ ಮಾಡಿಕೊಳ್ಳತೊಡಗಿದರು.

ಆದರೆ ಮನುಷ್ಯ ಎಂಬ ಪ್ರಾಣಿ ತುಂಬ ಅಪ್ರಾಮಾಣಿಕನಾಗುತ್ತಾನೆ. ತಾನು, ತನ್ನದು, ತನ್ನ ಕುಟುಂಬ, ತನ್ನ ಜಾತಿ, ತನ್ನ ಧರ್ಮ ಎಂಬ ಕೋಟೆ ಕಟ್ಟಿಕೊಳ್ಳುತ್ತಾನೆ. ಈ ಸ್ವಾರ್ಥಕ್ಕೆ ಹಿಂಸೆ ತಾಂಡವವಾಡುತ್ತದೆ. ವಚನಕಾರರು ಈ ಸ್ವಾರ್ಥದ ವಿರುದ್ಧ, ಮುಖ್ಯವಾಗಿ ಜಾತಿ ಎಂಬ ಸ್ವಾರ್ಥ ಹುಟ್ಟು ಹಾಕುವ ಹಿಂಸೆಯನ್ನು ನಿವಾರಿಸುವ ಪ್ರಯತ್ನದಲ್ಲಿ ತೊಡಗಿದರು. ಅವರು ರಚಿಸಿದ ವಚನಗಳು ಇಂತಹ ಪ್ರಯತ್ನದ ಬಹುಮುಖ್ಯ ಭಾಗ. ಜಾತಿ ಶ್ರೇಣೀಕರಣವನ್ನು ಆಚರಣೆಯಲ್ಲಿ ಚಾಲ್ತಿಯಲ್ಲಿಡುವ ಎಲ್ಲ ಆಚರಣೆಗಳನ್ನು ವಚನಕಾರರು ಧಿಕ್ಕರಿಸಿದರು. ಇಂತಹ ಪ್ರತಿಭಟನೆಯ ದನಿಯನ್ನು ತಮ್ಮ ವಚನಗಳಲ್ಲಿ ಅಭಿವ್ಯಕ್ತಿಸಿದರು. ಆದರೆ, ತನ್ನ ಜಾತಿ ಎಂಬ ಕೋಟೆಯನ್ನು ಭೇದಿಸಹೊರಟ ವಚನಗಳನ್ನು ಕಂಡು ಜಾತಿಗ್ರಸ್ಥ ಸಮಾಜದ ಪಂಡಿತರು ಕೆರಳಿದರು. ಈ ವಚನಗಳು ಸಮಾಜದಲ್ಲಿ ಹೊಸ ಅರಿವು ಮೂಡಿಸುತ್ತಿರುವುದನ್ನು, ಜಾತಿವ್ಯವಸ್ಥೆಯಿಂದ ನಲುಗಿದವರು ಅದರ ವಿರುದ್ಧ ದನಿಯೆತ್ತುವುದನ್ನು ಕಂಡು ತಮ್ಮ ಯಜಮಾನಿಕೆಯ ಅಸ್ತಿತ್ವ ಕುಸಿಯುತ್ತಿರುವುದಾಗಿ ಕಳವಳಿಸಿದರು. ಇಂತಹ ವಚನಗಳ ಪ್ರಭಾವವನ್ನು ಇಲ್ಲವಾಗಿಸುವ ಉಪಾಯಕ್ಕಾಗಿ ಹುಡುಕಿದರು.

Advertisements

ಆಗ ಅವರಿಗೆ ಹೊಳೆದದ್ದು ವಚನಗಳನ್ನೇ ತಿರುಚುವ ಮತ್ತು ವಚನಕಾರರ ಅಂಕಿತದಲ್ಲಿ ತಮ್ಮದೇ ಹಿತಾಸಕ್ತಿಯ ವಚನಗಳನ್ನು ಸೇರಿಸುವ ಕುಯುಕ್ತಿ. ಇಂತಹ ಕುಯುಕ್ತಿಯಿಂದ ಹುಟ್ಟಿದ ವಚನಗಳನ್ನು ಸುಳ್ಳುಸೃಷ್ಟಿಗಳು ಅಥವಾ ಹುಸಿನುಸುಳುಗಳು ಎಂದು ಕರೆಯಲಾಗುತ್ತದೆ. ಇಂತಹ ಸುಳ್ಳುಸೃಷ್ಟಿಯ ಅಥವಾ ಹುಸಿನುಸುಳುಗಳಾಗಿ ವಚನಲೋಕದಲ್ಲಿ ಸೇರಿಕೊಂಡ ವಚನಗಳನ್ನು ತಮ್ಮ ಆಳವಾದ ಅಧ್ಯಯನ ಮತ್ತು ಚಿಕಿತ್ಸಕ ವಿಮರ್ಶಾತ್ಮಕ ಪ್ರಜ್ಞೆಯಿಂದ ಗುರುತಿಸಿ ಪ್ರತ್ಯೇಕಿಸಿದವರು ಎಲ್.ಬಸವರಾಜು ಅವರು.

ಎಲ್‌ಬಿ ಎಂದೇ ಖ್ಯಾತರಾದವರು ಎಲ್ ಬಸವರಾಜು ಅವರು. ತಾವು ಸಂಪಾದಿಸಿದ ಸಿದ್ಧರಾಮನ ವಚನಗಳಿಗೆ ಅವರು ‘ಸೊನ್ನಲಾಪುರದ ಸಂತ ಸಿದ್ಧರಾಮನ ನಿಜವಚನಗಳು’ ಎಂದು ಕರೆದಿರುವುದನ್ನು, ಮುಖ್ಯವಾಗಿ  ‘ನಿಜ’ ಎಂಬ ವಿಶೇಷಣವನ್ನು ಬಳಸಬೇಕಾಗಿ ಬಂದ ಸಂದರ್ಭವನ್ನು ಮೇಲೆ ಪ್ರಸ್ತಾಪಿಸಿದ ಚಾರಿತ್ರಿಕ ಸಂಗತಿಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಬಸವರಾಜು ಅವರು ಈ ಪದ ಬಳಸಿದ್ದಕ್ಕೆ ಒಂದು ಹಿನ್ನೆಲೆಯಿದೆ. ನಾವು ಯಾವ ಜಾತಿಯಾಗಿರಲಿ, ಹೆಣ್ಣಾಗಿರಲಿ, ಗಂಡಾಗಿರಲಿ ನಾವು ಮನುಷ್ಯರಾಗಿ ಬದುಕಬೇಕು. ಮನುಷ್ಯರಾಗಿ ಬದುಕುವುದೆಂದರೆ ಘನತೆಯಿಂದ ವರ್ತಿಸುವುದು, ಇನ್ನೊಬ್ಬರ ಘನತೆಗೆ ಧಕ್ಕೆಯಾಗದಂತೆ ನಡೆಯುವುದು, ಸಹಮಾನವರಲ್ಲಿ ಪ್ರೀತಿ, ಸಹನೆ ತೋರಿಸುವುದು. ಸಾರಾಂಶದಲ್ಲಿ ಸರ್ವಜ್ಞ ಹೇಳಿದಂತೆ ‘ತನ್ನಂತೆ ಪರರ ಬಗೆಯುವುದು’. ಅಂದರೆ ಬೇರೆಯವರನ್ನು ತನ್ನಂತೆ ಭಾವಿಸುವುದು. ನನಗಿರುವ ಮನುಷ್ಯ ಭಾವಗಳು, ಆಸೆಗಳು, ಕನಸುಗಳು ನನ್ನೆದುರಿನ ಮನುಷ್ಯನಿಗೂ ಇದೆ ಎಂದು ಭಾವಿಸುವುದು. ಈ ಹಿನ್ನೆಲೆಯಲ್ಲಿ ಅವನ ಅಥವಾ ಅವಳ ಭಾವನೆಗಳನ್ನು, ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವುದು. ಇದು ನಿಜದ ನೆಲೆ. ಇಂತಹ ನಿಜದ ನೆಲೆಯ ಆಶಯ ವಚನಗಳಿಗಿದೆ.

ಸಿದ್ಧರಾಮನ ‘ನಿಜವಚನ’ಗಳನ್ನು ಸಂಪಾದಿಸುವ ಹಿನ್ನೆಲೆಯಲ್ಲಿ ಬಸವರಾಜು ಅವರು ಕೇವಲ ಸಾಹಿತ್ಯಿಕ, ವಿಮರ್ಶಾತ್ಮಕ, ತೌಲನಿಕ ಹತಾರುಗಳನ್ನು ಮಾತ್ರ ಬಳಸದೆ ಹಲವು ಶಾಸನಗಳನ್ನೂ ಅವಲೋಕಿಸಿದ್ದಾರೆ. ಆನಂತರವೇ ಇದು ‘ನಿಜ’ದ ವಚನವೋ ಅಥವಾ ಸುಳ್ಳುಸೃಷ್ಟಿ ಅಥವಾ ಹುಸಿನುಸುಳುಗಳಾಗಿ ಬಂದ ವಚನವೋ ಎಂದು ನಿಕಶಕ್ಕೆ ಒಡ್ಡಿದರು. ತಮ್ಮ ಪ್ರಯತ್ನಕ್ಕೆ ಮಠಮಾನ್ಯಗಳಿಂದ, ಪುರೋಹಿತಶಾಹಿ ಸ್ವಾಮಿಗಳಿಂದ, ವಿರೋಧ ಬಂದಾಗ ಅದನ್ನು ಬಸವರಾಜು ಅವರು ತಮ್ಮ ಕೆಲಸದ ಮೂಲಕವೇ ದಿಟ್ಟವಾಗಿ ಎದುರಿಸಿದರು.
ವಚನಗಳಾಚೆ ಬಂದರೆ ಬಸವರಾಜು ಅವರ ನಿಜದ ಹುಡುಕಾಟ ಅಥವಾ ಸತ್ಯದ ಹುಡುಕಾಟ ಮನುಷ್ಯ ಸಮಾಜದ ಆರೋಗ್ಯದ ಹಿನ್ನೆಲೆಯಲ್ಲಿ ಬಹಳ ದೊಡ್ಡ ಮೌಲ್ಯದ್ದಾಗಿದೆ. ಸಮಕಾಲೀನ ಸಂದರ್ಭದಲ್ಲಿಯಂತೂ ಸಾವಿರಾರು ಸುಳ್ಳುಗಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಬಿತ್ತರಿಸುವ ವಾಟ್ಸಪ್ ಯೂನಿವರ್ಸಿಟಿಗಳು ಹುಟ್ಟಿಕೊಂಡಿವೆ. ಸರ್ಕಾರಗಳ ಬಾಲಂಗೋಚಿಗಳಾಗಿರುವ ಮುಖ್ಯವಾಹಿನಿ ಟಿವಿಗಳು, ಪತ್ರಿಕೆಗಳು ಅದೇ ಕೆಲಸವನ್ನು ಮಾಡುತ್ತಿವೆ. ಈಗ ನಿಜದ ವಚನಗಳನ್ನಲ್ಲ, ‘ನಿಜದ ಮನುಷ್ಯ’ರನ್ನೇ ಹುಡುಕಲು ಫ್ಯಾಕ್ಟ್ ಚೆಕ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ! ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳುಗಳನ್ನು ಹೆಣೆಯಲಾಗುತ್ತದೆ. ಚರಿತ್ರೆಯನ್ನು ತಿದ್ದಲಾಗುತ್ತಿದೆ, ತಿರುಚಲಾಗುತ್ತಿದೆ. ಇದರ ವಿರುದ್ಧ ಸತ್ಯವನ್ನು ಹೇಳುವವರಿಗೆ ಬೆದರಿಕೆಗಳನ್ನು ಒಡ್ಡಲಾಗುತ್ತದೆ.

ಇಂದು ಎಲ್.ಬಸವರಾಜು ಅವರ ಜನ್ಮದಿನ. ನಿಜವನ್ನು ಅರಸ ಹೊರಟ ‘ಬಸವರಾಜುಪ್ರಜ್ಞೆ’ ನಮ್ಮಲ್ಲಿ ಎಚ್ಚರಗೊಳ್ಳಲಿ.

1417716 531606640266610 1974048228 o
ಡಾ. ಸರ್ಜಾಶಂಕರ್ ಹರಳಿಮಠ
+ posts

ಲೇಖಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X