ಬೀದರ್ ಜಿಲ್ಲೆಯ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಅಲೆಮಾರಿ ಜನಾಂಗದ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಪರೇನ್ಸ್ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
“2008 ರಲ್ಲಿ ರದ್ದುಪಡಿಸಲಾದ 25 ಜನ ಗೊಂದಳಿ ಸಮಾಜದ ನಿವೇಶನ ಅರ್ಜಿಯನ್ನು ಪುನಃ ಬೀದರ ನಗರ ಸಭೆಯ ಜಿ-3 ಯೋಜನೆಯಡಿ ಸೇರಿಸುವಂತೆ ನಗರಸಭೆ ಆಯುಕ್ತರಿಗೆ ಪತ್ರ ಬರೆಯಲು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಬೀದರ ತಾಲ್ಲೂಕಿನ ಮನ್ನಳ್ಳಿಯ ದರ್ವೇಶಿ ಕಾಲೋನಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಕ್ರಮವಹಿಸಬೇಕು ಹಾಗೂ ಹಿಂದೆ ಈ ಸಮಾಜದ ನಿವೇಶನಕ್ಕೆ ಸಂಬಂಧಪಟ್ಟ ಬಾಕಿ ಉಳಿದ ಶೀಘ್ರವೇ ಪೂರ್ಣಗೊಳಿಸಬೇಕು. ಯಾವ ತಾಲ್ಲೂಕಿನಲ್ಲಿ ಅಲೆಮಾರಿ ಜನಾಂಗದವರಿಗೆ ನಿವೇಶನ ನಿರ್ಮಾಣಕ್ಕೆ ಸರ್ಕಾರಿ ಜಮೀನಿನ ಕೊರತೆ ಇದೆಯೋ, ಅಂತಹ ತಾಲ್ಲೂಕಿನಲ್ಲಿ ಖಾಸಗಿ ಜಮೀನು ಖರೀದಿಸಲು ಕ್ರಮವಹಿಸಬೇಕು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯ ಭವನ ನಿರ್ಮಾಣಕ್ಕೆ ಅಲೆಮಾರಿ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು, ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ನಿಯಮಾನುಸಾರ ಕ್ರಮವಹಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಳಕೆಯಾಗದೇ ಪಾಳುಬಿದ್ದಿದೆ ʼಕಮಲನಗರ ಬಸ್ ನಿಲ್ದಾಣʼ
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ನಗರಸಭೆ ಆಯುಕ್ತ ಶಿವರಾಜ ರಾಠೋಡ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಬಡಿಗೇರ್, ಬಸವಕಲ್ಯಾಣದ ಸಹಾಯಕ ಆಯುಕ್ತರು ಹಾಗೂ ವಿವಿಧ ತಾಲ್ಲೂಕಿನ ತಹಶೀಲ್ದಾರರು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಕರ್ನಾಟಕ ರಾಜ್ಯ ಹಿಂದುಳಿದ ಅಲೆಮಾರಿ ಅರೆ ಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗನಾಥ ವಾಕೊಡೆ, ಅಲೆಮಾರಿ ಸಂಘದ ಸದಸ್ಯರು, ಸೇರಿದಂತೆ ಇತರರು ಉಪಸ್ಥಿತರಿದ್ದರು.