ಹಿಂದೂ ವಿವಾಹ ಕಾನೂನಿನ ಅಡಿಯಲ್ಲಿ ತಾಳಿ ಕಟ್ಟಿದ ನಂತರ ದಂಪತಿ ಸಪ್ತಪದಿ ತುಳಿಯಲೇಬೇಕು. ದಂಪತಿ ಸಪ್ತಪದಿ ತುಳಿಯದ ಹಾಗೂ ಇತರೆ ಆಚರಣೆಗಳು ನಡೆಯದ ಹಿಂದೂ ವಿವಾಹ ಸಿಂಧುವೇ ಅಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ತನಗೆ ವಿಚ್ಛೇದನ ನೀಡದೆ ಪತ್ನಿ ಎರಡನೇ ವಿವಾಹ ಮಾಡಿಕೊಂಡಿದ್ದಾರೆ ಎಂದು ಮೊದಲನೇ ಪತಿ ಆರೋಪಿಸಿದ ಪ್ರಕರಣದ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ.
ಸ್ಮೃತಿ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್, “ವಿವಾಹಕ್ಕೆ ಸಂಬಂಧಿಸಿದಂತೆ, ಸರಿಯಾದ ವಿಧಿವಿಧಾನಗಳೊಂದಿಗೆ ಮತ್ತು ಸರಿಯಾದ ರೂಪದಲ್ಲಿ ಆಚರಿಸುವುದು ಎಂಬ ಪದದ ಅರ್ಥವು ಶಾಸ್ತ್ರೋಕ್ತವಾಗಿ ಆಚರಿಸುವುದು ಎಂಬುದಾಗಿದೆ. ಮದುವೆಯನ್ನು ಶಾಸ್ತ್ರೋಕ್ತವಾಗಿ ನಡೆಸದಿದ್ದರೆ ಅಥವಾ ಸರಿಯಾದ ವಿಧಿವಿಧಾನಗಳು ಮತ್ತು ಸರಿಯಾದ ರೂಪದಲ್ಲಿ ನಡೆಸದಿದ್ದರೆ, ಅದನ್ನು ಶಾಸ್ತ್ರೋಕ್ತವಾಗಿ ನಡೆದಿದೆ ಎಂದು ಹೇಳಲಾಗುವುದಿಲ್ಲ’’ ಎಂದು ತೀರ್ಪು ನೀಡಿದ್ದಾರೆ.
“ಹಿಂದೂ ವಿವಾಹ ಕಾನೂನಿನ ಅಡಿಯಲ್ಲಿ ‘ಸಪ್ತಪದಿ’ ಆಚರಣೆಯು ಮಾನ್ಯವಾದ ವಿವಾಹವನ್ನು ರೂಪಿಸಲು ಅಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ಮದುವೆಯು ಮಾನ್ಯವಾದ ಮದುವೆಯಲ್ಲದಿದ್ದರೆ, ಕಾನೂನಿನ ದೃಷ್ಟಿಯಲ್ಲಿ ಅದು ಮದುವೆಯಲ್ಲ. ಆದರೆ ಪ್ರಸ್ತುತ ಪ್ರಕರಣದಲ್ಲಿ ಈ ಸಾಕ್ಷ್ಯಗಳ ಕೊರತೆಯಿದೆ’’ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? 14ನೇ ಏಕದಿನ ವಿಶ್ವಕಪ್ ಕ್ರಿಕೆಟ್ ಇಂದಿನಿಂದ ಆರಂಭ: ತಂಡಗಳು, ಪಂದ್ಯಗಳು, ಕ್ರೀಡಾಂಗಣ ಇತ್ಯಾದಿ ಫುಲ್ ಡೀಟೇಲ್ಸ್
ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 7ರಲ್ಲಿ ಹಿಂದೂ ಮದುವೆಯನ್ನು ಸಂಪ್ರದಾಯ ಪದ್ಧತಿ ಹಾಗೂ ಆಚರಣೆಗಳಿಗೆ ಅನುಗುಣವಾಗಿ ಒಪ್ಪಿತಗೊಳಿಸಲಾಗುತ್ತದೆ ಎಂದಿದೆ. ಎರಡನೆಯದಾಗಿ, ಏಳು ಹೆಜ್ಜೆಗಳನ್ನು ಇರಿಸಿದ ಬಳಿಕವೇ ಮದುವೆ ಸಂಪೂರ್ಣಗೊಳ್ಳುತ್ತದೆ ಎಂದು ಕೋರ್ಟ್ ಉಲ್ಲೇಖಿಸಿದೆ.
ಮಿರ್ಜಾಪುರ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದ ಪತ್ನಿ ವಿರುದ್ಧ ಪತಿ ನೀಡಿದ ದೂರಿನ ಪ್ರಕರಣದ ವಿಚಾರಣೆ ಹಾಗೂ 2022ರ ಏಪ್ರಿಲ್ 12ರಲ್ಲಿ ಸಮನ್ಸ್ ಆದೇಶವನ್ನು ಕೋರ್ಟ್ ರದ್ದುಗೊಳಿಸಿದೆ. ಸಪ್ತಪದಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯವಿಲ್ಲ. ಆದ್ದರಿಂದ, ಮಹಿಳೆಯ ಎರಡನೇ ಮದುವೆಯ ಆರೋಪವು ದೃಢೀಕರಣವಿಲ್ಲದ ಆರೋಪ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸ್ಮೃತಿ ಸಿಂಗ್ ಮತ್ತು ಸತ್ಯಂ ಸಿಂಗ್ ಮದುವೆ 2017ರಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಆದರೆ ಅವರಿಬ್ಬರ ಸಂಬಂಧದಲ್ಲಿ ಹೊಂದಾಣಿಕೆ ಸಾಧ್ಯವಾಗಿರಲಿಲ್ಲ. ಗಂಡನ ಮನೆ ತೊರೆದ ಸ್ಮೃತಿ, ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ತನಿಖೆ ಬಳಿಕ ಪೊಲೀಸರು ಸತ್ಯಂ ಸಿಂಗ್ ಹಾಗೂ ಆತನ ಮನೆಯವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಬಳಿಕ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದ ಸತ್ಯಂ ಸಿಂಗ್, ಪತ್ನಿ ವಿರುದ್ಧ ದ್ವಿಪತಿತ್ವದ ಆರೋಪ ಮಾಡಿದ್ದರು. ಮಿರ್ಜಾಪುರ ಪೊಲೀಸರು ಈ ಬಗ್ಗೆ ಕೂಲಂಕಷ ತನಿಖೆ ನಡೆಸಿದ್ದರು. ಸ್ಮೃತಿ ವಿರುದ್ಧದ ಆರೋಪ ಸುಳ್ಳು ಎಂದು ಕಂಡುಬಂದಿತ್ತು.
ಬಳಿಕ 2021ರ ಸೆ. 20ರಂದು ದೂರು ಸಲ್ಲಿಸಿದ್ದ ಸತ್ಯಂ, ತನಗ ವಿಚ್ಚೇದನ ನೀಡದೆ ಸ್ಮೃತಿ ಎರಡನೇ ಮದುವೆಯಾಗಿದ್ದಾಳೆ ಎಂದು ಆರೋಪಿಸಿದ್ದರು. ಮಿರ್ಜಾಪುರ ಮ್ಯಾಜಿಸ್ಟ್ರೇಟ್ 2022ರ ಏಪ್ರಿಲ್ 21ರಂದು ಸ್ಮೃತಿಗೆ ಸಮನ್ಸ್ ಜಾರಿಗೊಳಿಸಿದ್ದರು. ಆದೇಶ ಹಾಗೂ ಇಡೀ ಪ್ರಕರಣದ ವಿಚಾರಣೆ ಪ್ರಶ್ನಿಸಿ ಸ್ಮೃತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.