ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕ 24 ವರ್ಷದ ಶಿಕ್ಷಕಿಯನ್ನು ಪ್ರೀತಿ ಮಾಡಿದ ಕಾರಣಕ್ಕೆ ಹಲ್ಲೆಗೊಳಗಾಗಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸದ್ಯ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
17 ವರ್ಷದ ಬಾಲಕನ ಕುಟುಂಬ ಬೆಂಗಳೂರಿನ ನಾಗರಭಾವಿ ರಸ್ತೆಯ ಬೈರವೇಶ್ವರ ನಗರದಲ್ಲಿ ನೆಲೆಸಿದೆ. ಈತ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಬಾಲಕ ನೆಲೆಸಿದ್ದ ಏರಿಯಾದ ಖಾಸಗಿ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾನೆ.
ಬಳಿಕ ಶಿಕ್ಷಕಿ ಮತ್ತು ಬಾಲಕ ಇಬ್ಬರು ಸ್ವಲ್ಪ ದಿನ ಸುತ್ತಾಡಿದ್ದಾರೆ. ಆಗಾಗ ಕರೆ ಮಾಡಿ ಮಾತಾಡಿದ್ದಾರೆ. ಈ ವಿಷಯ ಬಾಲಕನ ತಂದೆಗೆ ತಿಳಿದ ತಕ್ಷಣ ಆತ ಇಬ್ಬರಿಗೂ ಬೈದು ಬುದ್ಧಿವಾದ ಹೇಳಿದ್ದಾರೆ. ಈ ಘಟನೆ ಬಳಿಕ ಕೆಲವು ದಿನ ದೂರ ಇದ್ದ ಇಬ್ಬರು ಮತ್ತೆ ಕರೆ ಮಾಡಿ ಮಾತಾಡಲು ಆರಂಭಿಸಿದ್ದಾರೆ.
ಅಕ್ಟೋಬರ್ 1ರಂದು ಬಾಲಕನ ಹುಟ್ಟುಹುಬ್ಬ ಇದ್ದ ಹಿನ್ನೆಲೆ ಇಬ್ಬರೂ ಭೇಟಿಯಾಗಿದ್ದಾರೆ. ಬಸವೇಶ್ವರ ನಗರದ ಬೇಕರಿಯೊಂದರಲ್ಲಿ ಕೇಕ್ ಕತ್ತರಿಸಿ ಹುಟ್ಟಿದ ದಿನವನ್ನು ಆಚರಿಸಿದ್ದಾರೆ. ನಂತರ ಅಲ್ಲೇ ಸಮೀಪ ಇರುವ ಪಾರ್ಕ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾರೆ.
ಬಾಲಕ ಮತ್ತು ಶಿಕ್ಷಕಿ ಇಬ್ಬರೂ ಪಾರ್ಕ್‌ನಲ್ಲಿ ಕುಳಿತು ಮಾತನಾಡುವ ವೇಳೆ, ಈ ವಿಷಯ ಶಿಕ್ಷಕಿಯನ್ನು ಮದುವೆಯಾಗುವ ಹುಡುಗನಿಗೆ ತಿಳಿದಿದೆ. ಆತ ಶಿಕ್ಷಕಿಯ ತಮ್ಮನಿಗೆ ಈ ಬಗ್ಗೆ ಕರೆ ಮಾಡಿ ತಿಳಿಸಿದ್ದಾನೆ.
‘ನಮ್ಮ ಅಕ್ಕನ ಸಹವಾಸಕ್ಕೆ ಬರಬೇಡ’ ಎಂದು ಶಿಕ್ಷಕಿಯ ತಮ್ಮ ಶಶಾಂಕ್ ಬಾಲಕನ ಮೇಲೆ ಹಲ್ಲೆ ಮಾಡಿದ್ದಾನೆ.
ಬಾಲಕ ತೀವ್ರ ಗಾಯಗೊಂಡ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮತ್ತೆ ಎಚ್ಚರಿಕೆ ಕೊಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ಮೋದಿ ನಿರಂಕುಶ ಪ್ರಭುತ್ವದಲ್ಲಿ ಪ್ರಾಮಾಣಿಕತೆಗೆ ಭಾರಿ ಬೆಲೆ ತೆರಬೇಕಾಗಿದೆ: ಮುಖ್ಯಮಂತ್ರಿ ಚಂದ್ರು
ಮಗ ಗಾಯಗೊಂಡಿರುವುದನ್ನು ಕಂಡ ಬಾಲಕನ ತಂದೆ ಹಲ್ಲೆ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.