ಪ್ಲೈವುಡ್ ವರ್ಕ್ಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿ ಸುಮಾರು ನಾಲ್ಕು ಅಂಗಡಿಗಳು ಬೆಂಕಿಗಾಹುತಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆದಿದೆ.
ನಗರದ ಗ್ಯಾರೇಜ್ ಲೈನ್‌ನ ಪ್ಲೈವುಡ್ ವರ್ಕ್ಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬಂದಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಅಗ್ನಿಯನ್ನು ನಿಯಂತ್ರಿಸುವಷ್ಟರಲ್ಲಿ ನಾಲ್ಕು ಅಂಗಡಿಗಳ ಅಪಾರ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.
ಪ್ಲೈವುಡ್ ಅಂಗಡಿಯ ಸಹಿತ ಪೂರ್ಣಿಮಾ ಹೊಟೇಲ್, ಬೈಕ್ ದುರಸ್ತಿ ಗ್ಯಾರೇಜ್ ಮತ್ತು ರೇಡಿಯಂ ವರ್ಕ್ಸ್ ಅಂಗಡಿಗಳಿಗೆ ಬೆಂಕಿ ತಾಗಿದ್ದು, ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಪೊಲೀಸ್ ಸಿಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಅಗ್ನಿ ಶಾಮಕ ದಳದವರಿಗೆ ಅನುವು ಮಾಡಿಕೊಟ್ಟರು. ಬೆಂಕಿಯ ಕೆನ್ನಾಲಿಗೆಯನ್ನು ಕಂಡ ನಗರದ ಜನತೆ ಗಾಬರಿಯೊಳಗಾಗಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಕಳೆದ ವರ್ಷವೂ ಇವೇ ಅಂಗಡಿಗಳಿಗೆ ಬೆಂಕಿ ತಾಗಿತ್ತು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಗದಗ | ಮನರೇಗಾ ಯೋಜನೆ ಅನುಷ್ಠಾನ; ಗದಗ ಜಿಲ್ಲಾ ಪಂಚಾಯತಿಗೆ ಎರಡನೇ ಸ್ಥಾನ
“ಗ್ಯಾರೇಜ್‌ನಲ್ಲಿ ಒಂದು ಬುಲೆಟ್ ಹಾಗೂ ನಾಲ್ಕು ಇತರೆ ಬೈಕ್‌ಗಳು ಸುಟ್ಟು ಕರಕಲಾಗಿವೆ. ಹಾಗೆಯೇ ಇತರೆ ಅಂಗಡಿಗಳಲ್ಲಿರುವ ಸಾಮಾಗ್ರಿಗಳು ಸುಟ್ಟು ಅಪಾರ ನಷ್ಟವಾಗಿದೆ” ಎಂದು ಅಂಗಡಿ ಮಾಲೀಕರು ಅಲವತ್ತುಕೊಂಡಿದ್ದಾರೆ.