- 20 ದಿನಗಳ ಹಿಂದೆ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು
- ಆಸ್ಪತ್ರೆಯ ಎರಡು ಲಕ್ಷ ರೂ. ಬಿಲ್ ಪಾವತಿ ಮಾಡಿದ ಸಚಿವ ಜಮೀರ್
ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯ ಕುಟುಂಬ ವೈದ್ಯಕೀಯ ವೆಚ್ಚ ಭರಿಸಲು ಸಂಕಷ್ಟದಲ್ಲಿರುವ ಮಾಹಿತಿ ತಿಳಿದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಎರಡು ಲಕ್ಷ ರೂ. ಬಿಲ್ ಪಾವತಿ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಮೃತದೇಹವನ್ನು ಸ್ವಗ್ರಾಮವಾದ ಚಿಕ್ಕನಾಯಕನಹಳ್ಳಿಯ ಹುಳಿಯಾರು ಪಾಳ್ಯಕ್ಕೆ ತೆಗೆದುಕೊಂಡು ಹೋಗಲು ಬೆಂಗಳೂರಿನಿಂದ ಆಂಬುಲೆನ್ಸ್ ವ್ಯವಸ್ಥೆ ಸಹ ಮಾಡಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ಹುಳಿಯಾರು ಪಾಳ್ಯದ ಹಣ್ಣಿನ ವ್ಯಾಪಾರಿ ಜಬಿವುಲ್ಲಾ ಎಂಬುವರ ಪತ್ನಿ ಮೂವತ್ತು ವರ್ಷದ ಫಾತಿಮಾಬಿ ಎಂಬುವರು ತಿಪಟೂರು ಆಸ್ಪತ್ರೆಗೆ ದಾಖಲಾಗಿದ್ದರು. ಆ ನಂತರ ಬೆಂಗಳೂರಿಗೆ ಚಿಕಿತ್ಸೆಗೆ ಬಂದಿದ್ದ ಅವರು ಜೆಪಿ ನಗರದ ಕ್ಷೇಮ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಂತರ ಅನಾರೋಗ್ಯ ಕಾಣಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದಲ್ಲಿ ಸ್ವತಂತ್ರ ಮಾಧ್ಯಮದ ಪಾಲಿಗೆ ಇದು ಅತ್ಯಂತ ಕರಾಳ ಕಾಲ
ಆಸ್ಪತ್ರೆ ಚಿಕಿತ್ಸೆ ವೆಚ್ಚ 3.50 ಲಕ್ಷ ರೂ. ಆಗಿದ್ದು ಕುಟುಂಬದವರ ಬಳಿ 50 ಸಾವಿರ ರೂ. ಮಾತ್ರ ಇದ್ದು, ಮೃತದೇಹ ತೆಗೆದುಕೊಂಡು ಹೋಗಲು 3 ಲಕ್ಷ ರೂ. ಪಾವತಿಸಬೇಕಿತ್ತು. ಪತ್ನಿಯನ್ನು ಕಳೆದುಕೊಂಡ ಪತಿ ಹಣ ಪಾವತಿ ಮಾಡಲು ಆಗದೆ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ತಕ್ಷಣ ಅಧಿಕಾರಿಗಳ ಮೂಲಕ ಆಸ್ಪತ್ರೆ ಆಡಳಿತ ಮಂಡಳಿ ಅವರ ಜತೆ ಚರ್ಚಿಸಿ ಸಚಿವರೇ ಅಧ್ಯಕ್ಷರಾಗಿರುವ ವಕ್ಫ್ ಕೌನ್ಸಿಲ್ ಫಾರ್ ವುಮೆನ್ಸ್ ಮೂಲಕ ಎರಡು ಲಕ್ಷ ರೂ. ಪಾವತಿ ಮಾಡಿ ಮೃತದೇಹ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿದರು.
ಹಾಸನದಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಿ ಎಂದಾಗ ಆಂಬುಲೆನ್ಸ್ ಚಾಲಕ ಜೆಪಿ ನಗರದ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದ, ಅಲ್ಲಿ ಚಿಕಿತ್ಸೆ ವೆಚ್ಚ ಪಾವತಿಸಲು ಆಗಿರಲಿಲ್ಲ. ಮೂರು ದಿನಗಳ ಹಿಂದೆ ತಾಯಿ ಅನಾರೋಗ್ಯದ ನಡುವೆಯೇ ಮಗು ನೋಡಲು ಹಂಬಲಿಸಿ ಮಗುವನ್ನು ಅಪ್ಪಿಕೊಂಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದ ಸಚಿವರು, ವಿಶೇಷ ಪ್ರಕರಣ ಎಂದು ಭಾವಿಸಿ ನೆರವು ಕಲ್ಪಿಸಿದ್ದಾರೆ.