ಪ್ರವಾದಿ ಮಹಮ್ಮದ್ ಅವರು ಜಗತ್ತು ಕಂಡ ಅತಿ ಶ್ರೇಷ್ಠ ಮಾನವ ಹಾಗೂ ಅತ್ಯುತ್ಕೃಷ್ಟ ಮಾರ್ಗದರ್ಶಕರಾಗಿದ್ದರು. ಯಾವುದೇ ಒಂದು ಜನಾಂಗಕ್ಕೆ ಇರದೆ ಸಕಲ ಮಾನವ ಕುಲಕ್ಕೆ ಸರ್ವಕಾಲಿಕ ಮಾರ್ಗದರ್ಶನವಾಗಿದೆ. ಜಗತ್ತಿನಲ್ಲಿ ಸಾಮರಸ್ಯದ ಬದುಕಿಗೆ ಪ್ರವಾದಿಗಳು ಮುನ್ನುಡಿ ಬರೆದಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ಮಹಮ್ಮದ್ ನಿಜಾಮುದ್ದೀನ್ ಹೇಳಿದರು.
ಬೀದರ್‌ನಲ್ಲಿ ಜಮಾತೆ ಇಸ್ಲಾಮಿ ಹಿಂದ್ ಏರ್ಪಡಿಸಿದ ಪ್ರವಾದಿ ಮಹಮ್ಮದ್ ಅವರ ಜೀವನದ ಕುರಿತು ಉಪನ್ಯಾಸ ಹಾಗೂ ಸಾಹಿತಿ, ಶಿಕ್ಷಕ ಡಾ. ಸಂಜೀವಕುಮಾರ ಅತಿವಾಳೆ ಯವರ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಮಾತನಾಡಿ , “ಶಿಕ್ಷಕ ಸಂಜೀವಕುಮಾರ ಅತಿವಾಳೆ ಅವರು ಕನ್ನಡದ ಅಪ್ಪಟ ಅಭಿಮಾನಿಯಾಗಿದ್ದು, ಕನ್ನಡದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಎಲೆಮರೆ ಕಾಯಿಯಂತೆ ಇರುವ ಪ್ರತಿಭಾವಂತರು, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಂಥವರನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕಾಗಿ ತಮ್ಮ ಸ್ವಂತ ನಿವೇಶನದಲ್ಲಿ ಸಭಾಂಗಣ ನಿರ್ಮಾಣ ಮಾಡಿ ಅವರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ” ಎಂದು ತಿಳಿಸಿದರು.
ರೇಣುಕಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಅಶೋಕ್ ಬೂದಿಹಾಳ ಮಾತನಾಡಿ , “ಸಮಾಜದಲ್ಲಿ ಮುಂದೆ ಬರಬೇಕಾದರೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಮುಂದುವರೆದರೆ ಯಶಸ್ವಿಯಾಗಬಹುದು” ಎಂದು ತಿಳಿಸಿದರು.
ಜಮಾತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ಅಧ್ಯಕ್ಷ ಮಹಮ್ಮದ್ ಮೌಜಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಪ್ರವಾದಿ ಮಹಮ್ಮದರು ಏಕ ದೇವೋಪಾಸನೆಯನ್ನು ಪಾಲಿಸಲು ತಿಳಿಸಿದರು. ವ್ಯಕ್ತಿ ಪೂಜೆಯನ್ನು, ಭಾವಚಿತ್ರ ಪೂಜೆ ತಿರಸ್ಕರಿಸಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಒದಗಿಸಲು ಪ್ರಯತ್ನಿಸಿದರು” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸೋಲಾರ್ ಪಾರ್ಕ್ ಎರಡನೇ ಹಂತದ ವಿಸ್ತರಣೆ ಕಾರ್ಯ ಚುರುಕು
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಸಾಹಿತಿ ಶಿಕ್ಷಕ ಡಾ. ಸಂಜೀವಕುಮಾರ ಅತಿವಾಳೆಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು.