ಕಲಮರಹಳ್ಳಿ ಗ್ರಾಮದ ಪಂಚಾಯಿತಿ ಸದಸ್ಯರೊಬ್ಬರು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಎದುರೇ ತಮ್ಮದೇ ಗ್ರಾಮದ ವ್ಯಕ್ತಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಬೆಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಸಕರ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ಈ ಘಟನೆ ನಡೆದಿದೆ.
ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಲಮರಹಳ್ಳಿ ಗ್ರಾಮದ ವಿಕಲಚೇತನ ಪೂಜಾರ್ ಪ್ರಕಾಶಪ್ಪನವರು ಸಭೆಗೆ ತೆರಳಿದ್ದಾಗ ತಮ್ಮ ಗ್ರಾಮದ ಸಮಸ್ಯೆಗಳನ್ನು, ಕೊರತೆಗಳನ್ನು ಹೇಳಿಕೊಳ್ಳಲು ಮುಂದಾದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ರಂಗಪ್ಪ ಪೂಜಾರ್ ಪ್ರಕಾಶ್ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
“ಜನಪ್ರತಿನಿಧಿಗಳು ಬಂಡವಾಳಿಗರಂತೆ ಭೂಮಾಲೀಕರಂತೆ, ನಡೆದುಕೊಳ್ಳುವುದು ಎಷ್ಟು ಸರಿ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಮತಗಳನ್ನು ನೀಡಿ ತಮ್ಮ ಜನಪ್ರತಿನಿಧಿಗಳು ಎಂದು ಗುರುತಿಸಿದ ಮತದಾರರನ್ನು ತುಚ್ಛವಾಗಿ ಕಾಣುವ ಈ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳಿಗೆ ಅದರಲ್ಲೂ ಮುಖ್ಯವಾಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಉತ್ತಮ ಸಾಮಾಜಿಕ ಮೌಲ್ಯದ, ಶಿಕ್ಷಣದ ಅವಶ್ಯಕತೆ ಇದೆ” ಎಂದು ಸ್ಥಳೀಯರು ಈ ಬೆಳವಣಿಗೆಯನ್ನು ಖಂಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಪ್ರವಾದಿ ಮಹಮ್ಮದ್ ಜಗತ್ತಿನ ಶ್ರೇಷ್ಠ ಮಾರ್ಗದರ್ಶಕ: ಮಹಮ್ಮದ್ ನಿಜಾಮುದ್ದೀನ್
“ಇಂತಹ ಘಟನೆಗಳಿಂದ ಗ್ರಾಮಗಳಲ್ಲಿ ಹಾಗೂ ನಾಡಿನಲ್ಲಿ ಜನಗಳ ಮಧ್ಯೆ ಬಹುದೊಡ್ಡ ಕಂದಕ ಏರ್ಪಡುತ್ತದೆ. ಇಂದಿನ ಜನಪ್ರತಿನಿಧಿಗಳಿಗೆ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಘಟನೆಯಿಂದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಒಂದು ಘಳಿಗೆ ಉದ್ವಿಗ್ನ ಸ್ಥಿತಿ ಉಂಟಾದರೂ ತಾಳ್ಮೆ ಮತ್ತು ಸೌಜನ್ಯದಿಂದ ಶಾಸಕರು, ದಂಡಾಧಿಕಾರಿಗಳು ಪೊಲೀಸ್ ಇಲಾಖೆ ಅಧಿಕಾರಿಗಳು ವಾತಾವರಣವನ್ನು ತಿಳಿಗೊಳಿಸಿ ಸಭೆಯನ್ನು ಶಾಂತ ರೀತಿಯಲ್ಲಿ ಮುಂದುವರಿಸಿದರು.