- ರಾಜ್ಯ ಸರ್ಕಾರವು ರಾಗಿಗುಡ್ಡ ಪ್ರಕರಣ ಗಂಭೀರವಾಗಿ ತೆಗೆದುಕೊಂಡಿಲ್ಲ
- ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕಾರಣದ ಪರಮಾವಧಿ: ಜೋಶಿ ಟೀಕೆ
ಶಿವಮೊಗ್ಗದ ರಾಗಿಗುಡ್ಡದ ಗಲಾಟೆಯನ್ನು ರಾಜ್ಯ ಸರ್ಕಾರ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಗಲಭೆಕೋರರಿಗೆ ಕಾಂಗ್ರೆಸ್ ಸರ್ಕಾರದಿಂದ ರಕ್ಷಣೆ ಇದೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ರಾಗಿಗುಡ್ಡದ ಗಲಾಟೆ ನೋಡಿದರೆ ರಾಜ್ಯ ಸರ್ಕಾರದ ತುಷ್ಟೀಕರಣ ರಾಕಾರಣದ ಪರಮಾವಧಿ ಎದ್ದು ಕಾಣುತ್ತದೆ” ಎಂದು ಕಿಡಿಕಾರಿದರು.
“ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವವರನ್ನು, ತಲ್ವಾರ್ ಹಿಡಿದು ಬೆದರಿಕೆ ಹಾಕೋರನ್ನು ರಕ್ಷಣೆ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು” ಎಂದು ಜೋಶಿ ವಾಗ್ದಾಳಿ ನಡೆಸಿದರು.
“ಕೇವಲ ಅಲ್ಪಸಂಖ್ಯಾತ ಸಮುದಾಯದ ಮತದಾರರು ಮಾತ್ರ ಕಾಂಗ್ರೆಸ್ಸಿಗೆ ಮತ ಹಾಕಿಲ್ಲ ಎನ್ನುವುದನ್ನು ಈ ಸರ್ಕಾರ ನೆನಪಿನಲ್ಲಿಟ್ಟುಕೊಳ್ಳಬೇಕು. ದೇಶದ್ರೋಹಿಗಳ, ಗಲಭೆಕೋರರ ಪರ ನಿಲ್ಲುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದರು.
“ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಹಿಂದೂಗಳ ಮನೆಗಳ ಮೇಲೆ, ಪೊಲೀಸರ ಮೇಲೆ ದಾಳಿ ಮಾಡಲಾಗಿದೆ. ಆದರೆ, ಅವರ ಮೇಲಿನ ಕೇಸ್‌ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗೆ ಒಂದು ಸಮುದಾಯವನ್ನು ಮಾತ್ರ ಓಲೈಕೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ನಾವು ಈ ನಡೆ ಖಂಡಿಸುತ್ತೇವೆ” ಎಂದರು.