ದುಬೈನಲ್ಲಿ ಉದ್ಯಮ ನಡೆಸುತ್ತಿದ್ದ, ಮಂಗಳೂರಿನಲ್ಲಿಯೂ ಹಲವು ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದ ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್ ಸಾವಿನ ಬಗ್ಗೆ ಅವರ ಸ್ನೇಹಿತ, ಎನ್‌ಆರ್‌ಐ ಉದ್ಯಮಿ ಡಾ. ಬಿ.ಆರ್ ಶೆಟ್ಟಿ ಶಂಕೆ ವ್ಯಕ್ತಪಡಿಸಿದ್ದಾರೆ. ಕಾಮತ್ ಅವರ ಸಾವು ಆತ್ಮಹತ್ಯೆಯಲ್ಲ ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಮತ್ ಸಾವು ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಕಾಮತ್ ಸಾವಿನ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುವಂತೆ ಆಗ್ರಹಿಸಿ ಬಿ.ಆರ್ ಶೆಟ್ಟಿ ಅವರು ಮಂಗಳೂರು ಪೊಲೀಸ್ ಕಮಿಷನರ್, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಗೃಹ ಸಚಿವ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ತ ಬರೆದಿದ್ದಾರೆ.
“ದುಬೈನಲ್ಲಿ ಹಲವು ವ್ಯವಹಾರಗಳನ್ನು ನಡೆಸುತ್ತಿದ್ದ ರಾಮದಾಸ್ ಕಾಮತ್ ಅವರು ಮಂಗಳೂರಿನಲ್ಲಿಯೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಾಮತ್ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು. ಕಾಮತ್ ಮತ್ತು ನಾನು 50 ವರ್ಷಗಳಿಂದ ಸ್ನೇಹಿತರು. ಅವರನ್ನು ನಾನು ಹತ್ತಿರದಿಂದ ಬಲ್ಲೆ. ಅವರು ಆತ್ಮಹತ್ಯೆ ಮಾಡಿಕೊಳ್ಳವ ಮನಸ್ಥಿತಿಯವರಲ್ಲ. ಅವರ ಸಾವಿನ ಹಿಂದೆ ಮೋರನೇ ವ್ಯಕ್ತಿಯ ಕೈವಾಡವಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸಬೇಕು” ಎಂದು ಬಿ.ಆರ್ ಶೆಟ್ಟಿ ಒತ್ತಾಯಿಸಿದ್ದಾರೆ.
“ಮಲ್ಟಿ ಮಿಲಿಯನೇರ್ ಆಗಿರುವ ಕಾಮತ್ ಅವರು ಹಲವಾರು ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ ದೇವಸ್ಥಾನ, ಮಠಗಳಿಗೆ ಕೋಟ್ಯಂತರ ರೂಪಾಯಿ ದಾನ ಮಾಡಿದ್ದಾರೆ. ಅಂತಹವರ ಸಾವಿನ ಬಗ್ಗೆ ನನಗೆ ಪತ್ರಿಕೆಗಳಲ್ಲಿ ಶ್ರದ್ಧಾಂಜಲಿ ಜಾಹೀರಾತು ನೋಡಿ ತಿಳಿಯಿತು. ಇದು ನಿಜಕ್ಕೂ ಆಘಾತಕಾರಿ. ಒಬ್ಬ ಉದ್ಯಮಿಯ ಸಾವು ನಿಗೂಢವಾಗಿ ಮರೆಯಾಗಿದೆ ಅಂದರೆ, ಅದು ಆತ್ಮಹತ್ಯೆ ಆಗಿರಲು ಸಾಧ್ಯವಿಲ್ಲ” ಎಂದು ಬಿ.ಆರ್ ಶೆಟ್ಟಿ ಹೇಳಿದ್ದಾರೆ.
“ಕಾಮತ್ ಅವರು ತಮ್ಮ ಜೀವನದಲ್ಲಿ ಉತ್ತಮ ಶಿಸ್ತು ಮತ್ತು ದೃಢ ಮನಸ್ಸು ಉಳ್ಳವರಾಗಿದ್ದರು. ಕಾಮತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನುವುದನ್ನು ನಂಬಲಾಗದು. ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಮಾತುಗಳು ಕೇಳಿಬರುತ್ತಿವೆ. ಸರಿಯಾದ ತನಿಖೆ ನಡೆದರೆ ಸತ್ಯಾಂಶ ಹೊರಗೆ ಬರುತ್ತದೆ” ಎಂದು ಅವರು ಹೇಳಿದ್ದಾರೆ.
“ಈಗಿನ ಕಾಲದಲ್ಲಿ ಸಿಸಿಟಿವಿ, ಮೊಬೈಲ್ ಕರೆ ಮಾಹಿತಿ, ಹಲವು ಮಾದರಿಯ ಸಾಕ್ಷ್ಯಗಳು ಸಿಗುತ್ತವೆ. ಪೊಲೀಸರು ತನಿಖೆ ನಡೆಸಿದರೆ, ಪ್ರಕರಣದ ಹಿಂದೆ ಯಾರಿದ್ದಾರೆ ಅನ್ನುವುದನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಯಾರಾದ್ರೂ ಅವರಿಗೆ ಮಾನಸಿಕ ಒತ್ತಡ ಕೊಟ್ಟು ಸಾಯಲು ಪ್ರೇರಣೆ ನೀಡಿದ್ದಾರೆಯೇ, ಕೊಲೆ ಮಾಡಿದ್ದಾರೆಯೇ ಎಂಬುದನ್ನು ಪತ್ತೆ ಮಾಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.
“ಕೊನೆಯ ಮೂರು ತಿಂಗಳಲ್ಲಿ ರಾಮದಾಸ್ ಕಾಮತ್ ಜೊತೆಗೆ ಸಂಪರ್ಕ ಹೊಂದಿದ್ದವರನ್ನು ತನಿಖೆ ಮಾಡಬೇಕು. ಸಿಸಿಟಿವಿ ಮಾಹಿತಿಗಳು ಪೊಲೀಸರಿಗೆ ಸತ್ಯಾಂಶ ಹೊರ ತೆಗೆಯಲು ಪ್ರಬಲ ಸಾಕ್ಷ್ಯವಾಗಲಿದೆ. ಈಗಾಗಲೇ ಸಾವಾಗಿ 12 ದಿನಗಳು ಕಳೆದಿವೆ. ಆದರೂ, ಪೊಲೀಸರ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಪ್ರಕರಣದ ಗಂಭೀರತೆ ಪರಿಗಣಿಸಿ ನಿಗದಿತ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಬೇಕು. ಕಾನೂನು ರೀತಿಯಲ್ಲಿ ತನಿಖೆ ನಡೆಸಬೇಕು” ಎಂದು ಬಿ.ಆರ್ ಶೆಟ್ಟಿ ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಈದಿನ.ಕಾಮ್ ಜೊತೆ ಮಾತನಾಡಿದ ಪತ್ರಕರ್ತ ತಾರಾನಾಥ್ ಕಾಪಿಕಾಡ್, “ಕಾಮತ್ ಅವರು ಗೌಡ ಸಾರಸ್ವತ ಬ್ರಾಹ್ಮಿಣ್ ಸಮುದಾಯಕ್ಕೆ ಸೇರಿದವರು. ಅದೇ ಸಮುದಾಯದ ಶಾಸಕ ವೇದ ವೇದವ್ಯಾಸ ಕಾಮತ್ ಅವರು ಪ್ರಕರಣದ ಬಗ್ಗೆ ಯಾವುದೇ ಮಾತನ್ನಾಡಿಲ್ಲವೆಂದು ಬಿ.ಆರ್ ಶೆಟ್ಟಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ರಾಮದಾಸ ಕಾಮತ್ ಅವರನ್ನು ಬ್ಲಾಕ್‌ಮೇಲ್ ಮಾಡಿರಬಹುದು. ಆ ಕಾರಣದಿಂದಾಗಿ ರಾಮದಾದ್ ಕಾಮತ್ ಅವರ ಸಾವಾಗಿರಬಹುದೆಂದು ಬಿ.ಆರ್ ಶೆಟ್ಟಿ ಶಂಕಿಸಿದ್ದಾರೆ. ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಯದಿದ್ದಾರೆ, ನ್ಯಾಯಾಲಯದ ಮೆಟ್ಟಿಲೇರುವುದಾಗಿ ಅವರು ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: 1000 ಮದ್ಯದಂಗಡಿಗಳನ್ನು ನಾವು ತೆರೆಯುವುದಿಲ್ಲ: ಸಿಎಂ ಸಿದ್ದರಾಮಯ್ಯ
ರಾಮದಾಸ್ ಕಾಮತ್ ಅವರ ಮೃತದೇಹವು ಸೆ.17ರಂದು ಮಂಗಳೂರಿನ ರಥಬೀದಿಯ ಅಪಾರ್ಟ್ಮೆಂಟ್ ಒಂದರಲ್ಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅವರ ಸಾವಿಗೆ ಯಾವುದೇ ರೀತಿಯ ಕಾರಣಗಳು ತಿಳಿದುಬಂದಿಲ್ಲ. ಪ್ರಕರಣ ನಡೆದು 15 ದಿನ ಕಳೆದರೂ ಯಾವುದೇ ಮಾಹಿತಿ ಹೊರಬಂದಿಲ್ಲ. ಪ್ರಕರಣವನ್ನು ಪೊಲೀಸರು ಮತ್ತು ಕೆಲವು ಸ್ಥಾಪಿತ ಹಿತಾಸಕ್ತಿಗಳು ಸೇರಿ ಮುಚ್ಚಿ ಹಾಕಲು ಯತ್ನಿಸುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ.