- ಸಿಎಂ ಸಿದ್ದರಾಮಯ್ಯ ಅವರು ಬಸವತತ್ವದ ಅಪ್ಪಟ ಅನುಯಾಯಿ: ಈಶ್ವರ ಖಂಡ್ರೆ
- ದುಡಿಮೆಗೆ ಬೆಲೆ, ಜಾತ್ಯತೀತ ಸಮ ಸಮಾಜದ ಕಲ್ಪನೆ ನೀಡಿದವರು ಬಸವಾದಿ ಪ್ರಮಥರು
ಜಾತಿರಹಿತ ಸಮಾಜದ ಕಲ್ಪನೆಯನ್ನು ವಿಶ್ವಗುರು ಬಸವಣ್ಣನವರು ಹೊಂದಿದ್ದರು. ಆದರೆ ಇಂದಿಗೂ ಈ ಆಶಯ ಸಾಕಾರವಾಗಿಲ್ಲ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ಮೈಸೂರಿನ ಕಲಾ ಮಂದಿರದಲ್ಲಿ ಶನಿವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬಸವಾದಿ ಪ್ರಮಥರು ಈ ಜಗತ್ತಿಗೆ ನೀಡಿರುವ ಕೊಡುಗೆ ಅನುಪಮವಾಗಿದೆ. ಕಾರ್ಲ್ ಮಾರ್ಕ್ಸ್‌ನ ದಾಸ್ ಕ್ಯಾಪಿಟಲ್ ಬರುವ ಮೊದಲೆ ದುಡಿಮೆಗೆ ಬೆಲೆ ನೀಡಿ, ಜಾತ್ಯತೀತ ಸಮ ಸಮಾಜದ ಕಲ್ಪನೆಯನ್ನು ನೀಡಿದವರು ಬಸವಾದಿ ಪ್ರಮಥರು” ಎಂದು ತಿಳಿಸಿದರು.
“ಕಾಯಕವೇ ಕೈಲಾಸ, ಇವ ನಮ್ಮವ ಎಂದು ಸಾರಿದ ಬಸವಣ್ಣನವರು ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ಮೊದಲಿಗರು. ಅನುಭವ ಮಂಟಪ ಇದಕ್ಕೆ ಇಂದಿಗೂ ಸಾಕ್ಷಿಯಾಗಿದೆ. ಈ ಸಮಾಜಕ್ಕೆ ವೀರಶೈವ ಲಿಂಗಾಯತ ಮಠ ಮಾನ್ಯಗಳು ನೀಡಿರುವ ಕೊಡುಗೆ ಅಪಾರವಾದ್ದು, ಎಲ್ಲ ಜಾತಿ, ಜನಾಂಗ, ಧರ್ಮದವರಿಗೆ ಯಾವುದೇ ಭೇದವಿಲ್ಲದೆ, ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹ ಮಾಡುತ್ತಿರುವ ನಮ್ಮ ಮಠಗಳು ಜಗತ್ತಿಗೆ ಆದರ್ಶಪ್ರಾಯವಾಗಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ನವೆಂಬರ್‌ನಲ್ಲಿ ರಾಜ್ಯದ ಜಾತಿಗಣತಿ ವರದಿ ನನ್ನ ಕೈ ಸೇರಲಿದೆ: ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಬಸವತತ್ವದ ಅಪ್ಪಟ ಅನುಯಾಯಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವ, ಬುದ್ಧರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದಾರೆ. ಸಿದ್ದರಾಮಯ್ಯ ಬಸವತತ್ವದ ಅಪ್ಪಟ ಅನುಯಾಯಿ. ಸರ್ವರನ್ನೂ ಜತೆಯಾಗಿ ಕೊಂಡೊಯ್ಯುತ್ತಿದ್ದಾರೆ. ಬಡ ಜನರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ ನೀಡಿ ಯಶಸ್ವಿ 5 ವರ್ಷ ಅಧಿಕಾರ ನಡೆಸಿದ ಸಿದ್ದರಾಮಯ್ಯನವರು ಈಗ ಮತ್ತೆ ಮುಖ್ಯಮಂತ್ರಿಗಳಾಗಿ ಬಡವರ ಕಲ್ಯಾಣಕ್ಕಾಗಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದಾರೆ” ಎಂದು ಈಶ್ವರ ಖಂಡ್ರೆ ಮೆಚ್ಚುಗೆ ವ್ಯಕ್ತಪಡಿಸಿದರು.
“ಮಾತೆಯರು ತಮ್ಮ ಮಕ್ಕಳಿಗೆ ವಚನ ಸಾಹಿತ್ಯ ಬೋಧಿಸಿದರೆ, ಅವರು ಸಂಸ್ಕಾರವಂತರಾಗಿ ನಮ್ಮ ಸಂಸ್ಕೃತಿ ಉಳಿಯುತ್ತದೆ. ಇಂದು ಯುವಜನತೆ ಮಾದಕ ವಸ್ತುಗಳಿಗೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದು, ಮಕ್ಕಳಲ್ಲಿ ಸದ್ಗುಣ ಬೆಳೆಯಲು ಅವರಿಗೆ ಬಾಲ್ಯದಿಂದಲೇ ವಚನ ಸಾಹಿತ್ಯ ಕಲಿಸಬೇಕು” ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಶ್ರೀವತ್ಸ, ಗಣೇಶ್ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.