ನರೇಂದ್ರ ಮೋದಿ ಸರ್ಕಾರವು ಪಾರದರ್ಶಕತೆಯ ಹೆಸರಿನಲ್ಲಿ ಮನರೇಗಾ ಯೋಜನೆಯಲ್ಲಿ ‘ಬಲವಂತದ ಡಿಜಿಟಲೀಕರಣ’ವನ್ನು ಮಾಡಿದೆ. ಅದರ ಪರಿಣಾಮವಾಗಿ ಕೆಲಸದ ಅಗತ್ಯವಿರುವವರೂ ಕೂಡ ನಿರುತ್ಸಾಹಗೊಂಡು ಯೋಜನೆಯ ಬೇಡಿಕೆ ಕುಸಿದಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ
ಆರ್ಥಿಕ ವರ್ಷ ಆರಂಭವಾದ ಆರು ತಿಂಗಳಲ್ಲೇ ಪ್ರಮುಖ ಗ್ರಾಮೀಣ ಉದ್ಯೋಗ ಕಾರ್ಯಕ್ರಮವಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (ಮನರೇಗಾ) ಹಣ ಖಾಲಿಯಾಗಿದೆ ಎಂದು ಮಾಧ್ಯಮ ವರದಿ ಮಾಡಿದ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಒಂದು ಕಡೆ, ಈ ಹಣಕಾಸು ವರ್ಷದ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಭಾರತದಲ್ಲಿ ಮಾರಾಟವಾದ ವಾಹನಗಳ ಪೈಕಿ ಶೇ.48 ರಷ್ಟು ಎಸ್‌ಯುವಿಗಳಾಗಿವೆ ಎನ್ನುವ ಮಾಹಿತಿ ಬಂದಿದೆ. ಅದೇ ಆರು ತಿಂಗಳ ಅವಧಿಯಲ್ಲಿ ಮನರೇಗಾ ಅಡಿಯಲ್ಲಿ ಇಡೀ ವರ್ಷಕ್ಕೆ ಮೀಸಲಿಟ್ಟಿದ್ದ 60,000 ಕೋಟಿ ರೂಪಾಯಿ ಬಜೆಟ್ ಖಾಲಿಯಾಗಿದೆ. ಇದು ದೇಶದಾದ್ಯಂತ ಹೆಚ್ಚುತ್ತಿರುವ ಗ್ರಾಮೀಣ ಸಂಕಷ್ಟ ಮತ್ತು ಹೆಚ್ಚುತ್ತಿರುವ ಅಸಮಾನತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಹಾಗೆಯೇ ವೇತನ ಪಾವತಿಗಳನ್ನು ವಿಳಂಬಗೊಳಿಸುವ ಮೂಲಕ ಮನರೇಗಾ ಕೆಲಸದ ಬೇಡಿಕೆಯನ್ನು ಪರೋಕ್ಷವಾಗಿ ನಿಗ್ರಹಿಸುತ್ತಿರುವ ಮೋದಿ ಸರ್ಕಾರದ ಆದ್ಯತೆಗಳನ್ನು ತೋರಿಸುತ್ತದೆ” ಎಂದು ರಮೇಶ್ ಹೇಳಿದ್ದಾರೆ.
“ವಿಷಯಗಳನ್ನು ಇನ್ನಷ್ಟು ಹದಗೆಡಿಸಲು, ಮೋದಿ ಸರ್ಕಾರವು ಪಾರದರ್ಶಕತೆಯ ಹೆಸರಿನಲ್ಲಿ ಡಿಜಿಟಲೀಕರಣವನ್ನು ಒತ್ತಾಯಿಸಿದೆ. ನಿಜವಾಗಿಯೂ ಕೆಲಸದ ಅಗತ್ಯವಿರುವವರಲ್ಲಿ ಡಿಜಿಟಲೀಕರಣವನ್ನು ಮನರೇಗಾ ಬೇಡಿಕೆಯನ್ನು ಕುಗ್ಗಿಸುವ ಸಾಧನವಾಗಿ ಬಳಸಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.