ಟೊಮ್ಯಾಟೋ ಬೆಳೆಯಲು ಸಾಲ ಮಾಡಿಕೊಂಡಿದ್ದ ರೈತ ದಂಪತಿ, ಬೆಲೆ ಕುಸಿತದಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ. ಪವಿತ್ರ ಮತ್ತು ಮನು ಮೃತ ದಂಪತಿ. ಪವಿತ್ರ ಅವರ ವೇಲಿಗೆ ಇಬ್ಬರೂ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.
ಪಾಲಕುಂಟೆ ಗ್ರಾಮದ ಪವಿತ್ರ ಮೂರು ವರ್ಷದ ಹಿಂದೆ ರೊಪ್ಪ ಗ್ರಾಮದ ಮನು ಅವರನ್ನು ಮದುವೆ ಆಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಇದ್ದು, ಅದನ್ನು ಪವಿತ್ರ ಅವರ ತವರು ಮನೆಯಲ್ಲಿ ಬಿಟ್ಟಿದ್ದರು.
ಟೊಮ್ಯಾಟೋ ಬೆಲೆ ಆಕಾಶಕ್ಕೇರಿದ್ದನ್ನು ಕಂಡು ದಂಪತಿ ಟೊಮ್ಯಾಟೋ ಬೆಳೆಯಲು ಮುಂದಾಗಿದ್ದರು. ಅದಕ್ಕಾಗಿ ಖಾಸಗಿ ಲೇವಾದೇವಿಗಾರರ ಬಳಿ ಸಾಲ ಮಾಡಿಕೊಂಡಿದ್ದರು. ಆದರೆ, ಇತ್ತೀಚೆಗೆ ಟೊಮ್ಯಾಟೋ ಬೆಲೆ ತೀವ್ರ ಕುಸಿತ ಕಂಡಿದ್ದು ಅವರನ್ನು ಕಂಗೆಡುವಂತೆ ಮಾಡಿತ್ತು. ಕೊನೆಗೆ ದಂಪತಿ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಟೊಮ್ಯಾಟೋ ಸೇರಿದಂತೆ ವಿವಿಧ ಬೆಳೆಗಳಲ್ಲಿ ನಷ್ಟವಾಗಿತ್ತು. ಸಾಲದ ಹೊರೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕುಟುಂಬಸ್ಥರು ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, 91529 87821, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.