ಇಸ್ರೇಲ್ – ಪ್ಯಾಲೆಸ್ಟೀನ್ ಹಮಾಸ್ ಸಂಘಟನೆ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಎರಡೂ ದೇಶಗಳಲ್ಲಿ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡವೆ.
ಶನಿವಾರ ಬೆಳಗ್ಗೆ ಆರಂಭವಾದ ಪ್ಯಾಲೆಸ್ಟೀನ್ ಸಂಘಟನೆ ಹಮಾಸ್ ಆರಂಭಿಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಕನಿಷ್ಠ 300 ಜನರು ಸಾವನ್ನಪ್ಪಿದ್ದಾರೆ . ಪ್ರತೀಕಾರವಾಗಿ ಮಿಲಿಟರಿ ಕಾರ್ಯಾಚರಣೆ ನಡೆಸಿದ ಇಸ್ರೇಲ್ ರಕ್ಷಣಾ ಪಡೆ ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ದಾಳಿ ನಡೆಸಿದ ಪರಿಣಾಮ 230 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ದಕ್ಷಿಣ ಇಸ್ರೇಲ್‌ನಲ್ಲಿ ಇಸ್ರೇಲ್ ಸೇನೆ ಮತ್ತು ಹಮಾಸ್ ನಡುವೆ ತೀವ್ರ ಹೋರಾಟ ಇನ್ನೂ ಮುಂದುವರಿದಿದೆ. ಇತ್ತೀಚಿನ ವರದಿಯ ಪ್ರಕಾರ, ಸ್ಡೆರೋಟ್ ಮತ್ತು ಕಿಬ್ಬುಟ್ಜ್ ನಿರ್ ಆಮ್‌ನಂತಹ ಪ್ರದೇಶಗಳಲ್ಲಿ ರಾಕೆಟ್ ದಾಳಿ ನಡೆಸಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಎಂದು ಇಸ್ರೇಲ್ ಸೇನಾ ವಕ್ತಾರರು ತಿಳಿಸಿದ್ದಾರೆ.
ಹಮಾಸ್ ನಡೆಸಿದ ಅತಿ ದೊಡ್ಡ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ .
ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾ ಪಟ್ಟಿಯಲ್ಲಿ ಇಸ್ರೇಲಿ ಬಾಂಬ್ ದಾಳಿಯಲ್ಲಿ ಸುಮಾರು 230 ಜನರು ಸಾವನ್ನಪ್ಪಿದ್ದಾರೆ. ಪಶ್ಚಿಮ ದಂಡೆ ಪ್ರದೇಶದಲ್ಲಿಯೂ ಸಾವುಗಳು ವರದಿಯಾಗಿವೆ. ಇಸ್ರೇಲ್ ನಡೆಸಿದ ಆಪರೇಷನ್ ಐರನ್ ಸ್ವೋರ್ಡ್ಸ್‌ನಲ್ಲಿ ಕನಿಷ್ಠ 1,700 ಜನರು ಗಾಯಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಗುಜರಾತನ್ನು ಮೆರೆಸಲು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮುಳುಗಿಸಿತೇ ಬಿಸಿಸಿಐ?
ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್) ಮತ್ತು ಹಮಾಸ್ ನಡುವಿನ ಹೋರಾಟವು ಭಾನುವಾರ ಬೆಳಿಗ್ಗೆಯೂ ಮುಂದುವರೆದಿದೆ. ದಕ್ಷಿಣ ಇಸ್ರೇಲ್‌ನ ಹಲವು ಭಾಗಗಳಲ್ಲಿ ರಾಕೆಟ್ ಸೈರನ್‌ಗಳು ಸದ್ದು ಮಾಡುತ್ತಲೇ ಇವೆ ಎಂದು ಇಸ್ರೇಲಿ ಮಾಧ್ಯಮ ವರದಿ ಮಾಡಿದೆ. ಗಾಜಾ ಪಟ್ಟಿಯ ಸಮೀಪದಲ್ಲಿರುವ ಸ್ಡೆರೋಟ್, ಕಿಬ್ಬುಟ್ಜ್ ನಿರ್ ಆಮ್, ಯಾದ್ ಮೊರ್ಡೆಚೈ ಮತ್ತು ನೆಟೀವ್ ಹಾಸರಾ ಮುಂತಾದ ಪ್ರದೇಶಗಳಲ್ಲಿ ಇಸ್ರೇಲ್ ಸೇನೆಯಿಂದ ಎಚ್ಚರಿಕೆಯ ಸಂದೇಶಗಳು ಕೆಳಿ ಬಂದವು.
ಇಸ್ರೇಲಿ ಸೇನಾ ವಕ್ತಾರರು ಸಾಮಾಜಿಕ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವರದಿಯಲ್ಲಿ, ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿಲ್ಲ ಎಂದು ತಿಳಿಸಿದ್ದಾರೆ.
ಯುದ್ಧ ಶುರುವಾದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಾಗರಿಕರು ತಮ್ಮ ಮೂಲ ನಿವಾಸಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.
ಹಮಾಸ್ ಸಂಘಟನೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಇಸ್ರೇಲಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಹಮಾಸ್ ನಾಯಕರ ಪ್ರಕಾರ ಅವರ ವಶದಲ್ಲಿರುವ ಇಸ್ರೇಲಿ ಕೈದಿಗಳು ನೂರಕ್ಕೂ ಹೆಚ್ಚಿದ್ದು,ಇಸ್ರೇಲ್‌ನ ಜೈಲಿನಲ್ಲಿರುವ ಎಲ್ಲ ಪ್ಯಾಲೆಸ್ಟೀನ್ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಷರತ್ತು ವಿಧಿಸಿದ್ದಾರೆ.