ರಾಜ್ಯ ರಾಜಧಾನಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 62ನೇ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಅಡಿಯಲ್ಲಿ ಆಯೋಜಿಸಲಾದ ‘ಬೆಂಗಳೂರು ಮ್ಯಾರಥಾನ್’ ಅನ್ನು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಭಾನುವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಭಾರತವು ಒಲಿಂಪಿಕ್ಸ್, ಕಾಮನ್ವೆಲ್ತ್ ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. 19ನೇ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಆಟಗಾರರು ತಮ್ಮ ದಾಖಲೆ ಮುರಿದ ಪ್ರದರ್ಶನದ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇದೀಗ, ಬೆಂಗಳೂರು ಮ್ಯಾರಥಾನ್ನಲ್ಲಿ ವಿಶ್ವದ ನಾನಾ ಭಾಗಗಳಿಂದ ಸಾವಿರಾರು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಇದು ಸಂತಸದ ವಿಷಯ ಹಾಗೂ ಈ ಮ್ಯಾರಥಾನ್ ಕರ್ನಾಟಕವನ್ನು ‘ಇಂಟರ್ನ್ಯಾಷನಲ್ ಹಬ್ ಆಫ್ ಸ್ಪೋರ್ಟ್ಸ್’ ಮಾಡುವ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಹೇಳಿದರು.
“ಭಾರತ ಸರ್ಕಾರದ ಕ್ರೀಡಾ ಸಚಿವಾಲಯ ಮತ್ತು ಕ್ರೀಡಾ ಸಂಸ್ಥೆಗಳು ಮತ್ತು ಕರ್ನಾಟಕ ಸರ್ಕಾರ ಅನೇಕ ಕ್ರೀಡಾ ಯೋಜನೆಗಳನ್ನು ಮಾಡಿದೆ. ಆಟಗಾರರು ಅವುಗಳ ಲಾಭವನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಕ್ರೀಡೆಯ ಮಟ್ಟ ಸುಧಾರಿಸಿದೆ. ಅದರ ಫಲಿತಾಂಶ ಇಂದು ನಮ್ಮೆಲ್ಲರ ಮುಂದೆಯಿದೆ” ಎಂದರು.
“ಈ ಮ್ಯಾರಾಥಾನ್ನಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರಿಗೆ ಶುಭಾಶಯ, ಅತ್ಯುತ್ತಮ ಪ್ರದರ್ಶನ ಮತ್ತು ಉಜ್ವಲ ಭವಿಷ್ಯಕ್ಕಾಗಿ ಭಾಗವಹಿಸುವ ಎಲ್ಲ ಆಟಗಾರರಿಗೆ ಒಳ್ಳೆಯದಾಗಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕ್ರೀಡಾ ಸಚಿವರಾದ ಬಿ. ನಾಗೇಂದ್ರ, ಕರ್ನಾಟಕದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜ್, ಓಟದ ನಿರ್ದೇಶಕ ನಾಗರಾಜ್, ಅರ್ಜುನ್ ಪ್ರಶಸ್ತಿ ಪುರಸ್ಕೃತ ಡಾ. ರೀತ್ ಅಬ್ರಹಾಂ, ವಿಪ್ರೋ ಮುಖ್ಯಸ್ಥ ಎಚ್ ಆರ್ ಸೌರಭ್ ಗೋವಿಲ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.