ಭಾನುವಾರ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿ, ಒಂದೇ ಕುಟುಂಬದ ಮೂವರು ಸಜೀವ ದಹನವಾಗಿರುವ ಮನಕಲುಕುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಸಮೀಪ ಕೆಕೋಡ್‌ನಲ್ಲಿ ನಡೆದಿದೆ.
ಅರ್ಚಕ ವೃತ್ತಿಯಲ್ಲಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಮೃತ ದುರ್ದೈವಿಗಳು. ಇನ್ನೋರ್ವ ಪುತ್ರ ಭರತ್ (28) ಗಂಭೀರವಾಗಿ ಗಾಯಗೊಂಡಿದ್ದು, ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿಸಲಾಗಿದೆ.
ಮನೆಯ ಒಳಗಿನ ಕೋಣೆಯೊಳಗೆ ಕಟ್ಟಿಗೆಗಳನ್ನು ಇಡಲಾಗಿತ್ತು. ಇದಕ್ಕೆ ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅರಳಸುರಳಿ ಹೊಸನಗರ ಮಾರ್ಗದಲ್ಲಿರುವ ಕೆಕೋಡ್ ಗ್ರಾಮದಲ್ಲಿನ ಗ್ರಾಮಸ್ಥರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಒಂದೇ ಕುಟುಂಬದ ಮೂವರು ಸಜೀವ ದಹನವಾಗಿರುವ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಂದೇ ಕುಟುಂಬದ ನಾಲ್ವರು ಬೆಂಕಿ ಅವಘಡದಲ್ಲಿ ಸಿಲುಕಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದೆ.
ಘಟನಾ ಸ್ಥಳಕ್ಕೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಶಿವಮೊಗ್ಗ ಎಸ್‌ಪಿ ಜಿಕೆ ಮಿಥುನ್ ಕುಮಾರ್ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು.
ಕೌಟುಂಬಿಕ ಸಮಸ್ಯೆ ಹಿನ್ನೆಲೆ, ಮನೆ ಒಳಗೆ ಕಟ್ಟಿಗೆಯಿಂದ ಚಿತೆ ಮಾಡಿಕೊಂಡು ಬೆಂಕಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ಸುದ್ದಿ ಓದಿದ್ದೀರಾ?ಬೆಂಗಳೂರು | ಅತ್ತಿಬೆಲೆಯಲ್ಲಿ ಹೊತ್ತಿ ಉರಿದ ಪಟಾಕಿ ಅಂಗಡಿ: 12 ಮಂದಿ ಮೃತ್ಯು
ಪೊಲೀಸ್ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.