ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ 14 ಜನರಲ್ಲಿ ಒಂದೇ ಗ್ರಾಮದ ಎಂಟು ವಿದ್ಯಾರ್ಥಿಗಳೂ ಸೇರಿದ್ದಾರೆ.
ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಈವರೆಗೆ 14 ಜನರು ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಸಾವನ್ನಪ್ಪಿದ ಎಲ್ಲರೂ ಮೂಲತಃ ತಮಿಳುನಾಡಿನವರು. ಮೃತರಲ್ಲಿ ಎಂಟು ಮಂದಿ ವಿದ್ಯಾರ್ಥಿಗಳಾಗಿದ್ದು, ಇವರೆಲ್ಲರೂ ಒಂದೇ ಗ್ರಾಮದವರಾಗಿದ್ದಾರೆ. ವ್ಯಾಸಂಗ ಮಾಡುತ್ತಾ, ಬಿಡುವಿನ ವೇಳೆ ದೀಪಾವಳಿ ಸಮಯದಲ್ಲಿ ಕೂಲಿ ಕೆಲಸಕ್ಕೆಂದು ಪಟಾಕಿ ಅಂಗಡಿಗೆ ಬಂದಿದ್ದರು.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಅಮ್ಮಾಪಟ್ಟಿ ಗ್ರಾಮದಿಂದ ಅತ್ತಿಬೆಲೆ ಪಟಾಕಿ ಗೋದಾಮಿಗೆ 10 ಜನ ಕಾರ್ಮಿಕರು ಕೆಲಸಕ್ಕಾಗಿ ಬಂದಿದ್ದರು. ಇವರಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಆದಿಕೇಶವನ್ (17), ಗಿರಿ (17), ವೇಡಪ್ಪನ್ (22), ಆಕಾಶ್ (17), ವಿಜಯರಾಘವನ್ (19), ವೆಳಂಬರದಿ (20), ಪ್ರಕಾಶ್ (20), ಸಚಿನ್ (22) ಎಂದು ಗುರುತಿಸಲಾಗಿದೆ.
ಅಲ್ಲದೇ, ಕಲ್ಲಕುರುಚ್ಚಿ ಜಿಲ್ಲೆಯ ಪ್ರಭಾಕರನ್ (17), ವಸಂತರಾಜ್ (23), ಅಪ್ಪಾಸ್ (23) ಮೃತಪಟ್ಟವರು. ಇನ್ನಿಬ್ಬರ ಮೃತದೇಹ ಪತ್ತೆಯಾಗಿದ್ದು, ಅವರುಗಳ ಗುರುತು ಸಿಕ್ಕಿಲ್ಲ.
ಬೆಂಕಿ ಅವಘಡದಲ್ಲಿ 7 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ನವೀನ್, ರಾಜೇಶ್, ವೆಂಕಟೇಶ್ ಎಂಬುವವರನ್ನು ಬೆಂಗಳೂರಿನ ಮಡವಾಲದ ಸೈಂಟ್ ಜಾನ್ಸನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜಯ್, ಚಂದ್ರು, ರಾಜೇಶ್ ಮತ್ತು ಫೌಲ್ ಕಬೀರ್ ಎಂಬುವವರಿಗೆ ಅತ್ತಿಬೆಲೆಯ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗೋದಾಮಿನ ಮಾಲೀಕರ ಮೇಲೆ ಕ್ರಮ; ಮುಖ್ಯಮಂತ್ರಿ
ಘಟನೆ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, “ಅತ್ತಿಬೆಲೆ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 14 ಜನ ಸಾವನ್ನಪ್ಪಿದ್ದಾರೆ. ಪಟಾಕಿ ಗೋದಾಮಿನಲ್ಲಿ ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರಾ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಗೋದಾಮಿನ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅತ್ತಿಬೆಲೆಯಲ್ಲಿ ಹೊತ್ತಿ ಉರಿದ ಪಟಾಕಿ ಅಂಗಡಿ: 12 ಮಂದಿ ಮೃತ್ಯು
ಏನಿದು ಘಟನೆ?
ಪಟಾಕಿ ಅನ್ಲೋಡ್ ಮಾಡುತ್ತಿದ್ದ ವೇಳೆ ಪಟಾಕಿ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು, 12 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದರು. ಬಳಿಕ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇನ್ನು 7 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರೆಲ್ಲ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ನವೀನ್ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದೆ. ಲಾರಿಯಿಂದ ಪಟಾಕಿ ಅನ್ ಲೋಡ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದ ಪರಿಣಾಮ, 4-5 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.