ಹಮಾಸ್ ಸಂಘಟನೆಯಿಂದ ದಾಳಿಗೊಳಗಾಗಿರುವ ಇಸ್ರೇಲ್‌ನಲ್ಲಿ ಮೇಘಾಲಯದ ರಾಜ್ಯಸಭಾ ಸದಸ್ಯರಾದ ಡಾ. ವಾನ್‌ವೈರೋಯ್ ಖಾರ್ಲುಖಿ, ಅವರ ಪತ್ನಿ ಹಾಗೂ ಪುತ್ರಿ ಕೂಡ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇಘಾಲಯದ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್‌ಪಿಪಿ) ರಾಜ್ಯಸಭಾ ಸದಸ್ಯ ಡಾ ಖಾರ್ಲುಖಿ ಅವರು ತಮ್ಮ ರಾಜ್ಯದ 24 ಸ್ಥಳೀಯರೊಂದಿಗೆ ಜೆರುಸಲೇಂಗೆ ತೆರಳಿದ್ದರು. ಯುದ್ಧದ ವಾತಾವರಣ ನಿರ್ಮಾಣವಾದ ಕಾರಣ ಅವರು ಬೆತ್ಲೆಹೆಮ್‌ನಲ್ಲಿ ಸಿಲುಕಿಕೊಂಡಿದ್ದಾರೆ.
ಮೇಘಾಲಯ ಮುಖ್ಯಮಂತ್ರಿ ಮತ್ತು ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ, ಡಾ ಖಾರ್ಲುಖಿ ಅವರು ಭಾರತಕ್ಕೆ ವಾಪಸ್ ಮರಳುವುದನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ (ಎಂಇಎ) ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇಸ್ರೇಲ್ | ಭಾರತೀಯ ವಿದ್ಯಾರ್ಥಿಗಳಿಗೆ ರಾಯಭಾರ ಕಚೇರಿಯಿಂದ ಸುರಕ್ಷತಾ ಸೂಚನೆ
ಮೂಲಗಳ ಪ್ರಕಾರ, ಖಾರ್ಲುಖಿ ಅವರನ್ನು ಭಾನುವಾರ ಈಜಿಪ್ಟ್‌ಗೆ ಭಾರತೀಯ ರಾಯಭಾರ ಕಚೇರಿಯು ಸ್ಥಳಾಂತರಿಸುವ ಸಾಧ್ಯತೆಯಿದೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ ಪೂರ್ಣ ಪ್ರಮಾಣದ ಯುದ್ಧದಿಂದ ಇಲ್ಲಿಯವರೆಗೆ 500 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು ಭಾರತೀಯ ನಾಗರಿಕರಿಗೆ ಎಚ್ಚರಿಕೆಯನ್ನು ನೀಡುವಂತೆ ಮತ್ತು ಅಗತ್ಯವಿದ್ದರೆ ಕಚೇರಿಯನ್ನು ಸಂಪರ್ಕಿಸುವಂತೆ ಎಚ್ಚರಿಸಿದೆ.
ಏತನ್ಮಧ್ಯೆ, ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಬಾಲಿವುಡ್ ನಟಿ ನುಶ್ರತ್ ಭರುಚ್ಚ ಅವರು ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.