ಬೆಂಗಳೂರಿನ ‘ನಮ್ಮ ಮೆಟ್ರೋ’ದ ನೇರಳೆ ಮಾರ್ಗವು ಯಾವುದೇ ಅಧಿಕೃತ ಉದ್ಘಾಟನೆ ಇಲ್ಲದೆ, ವಿಸ್ತರಿತ ಮಾರ್ಗದಲ್ಲಿ ಅಕ್ಟೋಬರ್ 9 (ಸೋಮವಾರ) ರಿಂದ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ.
2.1 ಕಿ.ಮೀ ದೂರ ಇರುವ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮತ್ತು 2.05 ಕಿ.ಮೀ ಇರುವ ಕೆಂಗೇರಿ-ಚಲ್ಲಘಟ್ಟ ಮಾರ್ಗಗಳಲ್ಲಿ ವಾಣಿಜ್ಯ ಸೇವೆಗಳು ಸೋಮವಾರ ಬೆಳಗ್ಗೆ 5 ರಿಂದ ಆರಂಭವಾಗಲಿವೆ. ಈ ಮಾರ್ಗಗಳು ನೇರಳೆ ಬಣ್ಣದ ಭಾಗವಾಗಿವೆ. 42.85 ಕಿ.ಮೀ ವ್ಯಾಪ್ತಿಯಿರುವ ಈ ಮಾರ್ಗವು ಪೂರ್ವದಲ್ಲಿ ವೈಟ್‌ಫೀಲ್ಡ್‌ನಿಂದ ಪಶ್ಚಿಮದಲ್ಲಿ ಚಲ್ಲಘಟ್ಟದವರೆಗೆ ವಿಸ್ತರಿಸಿದೆ.
“ಅಧಿಕೃತ ಉದ್ಘಾಟನೆಗೆ ಕಾಯದೆ ಸಾರ್ವಜನಿಕರಿಗೆ ಎರಡೂ ಮಾರ್ಗಗಳನ್ನು ತೆರೆಯಲು ನಾನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ವೈಯಕ್ತಿಕವಾಗಿ ವಿನಂತಿಸಿದ್ದೇನೆ. ಈ ತಿಂಗಳ ಕೊನೆಯಲ್ಲಿ ಅಧಿಕೃತ ಉದ್ಘಾಟನೆ ನಡೆಯಲಿದೆ” ಎಂದು ಸಂಸದ ಪಿ ಸಿ ಮೋಹನ್ ತಿಳಿಸಿದ್ದಾರೆ.
ನಾಳೆಯಿಂದ ನೇರಳೆ ಮಾರ್ಗದಲ್ಲಿ ‘ನಮ್ಮ ಮೆಟ್ರೋ’ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಗಳೂರಿನ ಬಿಜೆಪಿ ಸಂಸದರು ಸ್ವಾಗತ ಕೋರಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿ ಪ್ರಧಾನಿ ಮೋದಿಯವರಿಗೆ ಸಂಸದರು ಧನ್ಯವಾದ ತಿಳಿಸಿದ್ದಾರೆ. ಅ.9 ರಿಂದ ಚಲ್ಲಘಟ್ಟ-ಕೆಂಗೇರಿ, ಬೈಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ.
ಈ ಸುದ್ದಿ ಓದಿದ್ದೀರಾ? ಜಾತಿಗಣತಿ ಮಾಡಿ ಏನು ಉಪಯೋಗ: ಹೆಡ್.ಡಿ.ಕುಮಾರಸ್ವಾಮಿ ಪ್ರಶ್ನೆ
ಕೆ ಆರ್ ಪುರಂ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮೆಟ್ರೋ ಮಾರ್ಗಗಳ ಆರಂಭದಿಂದ ಬೆಂಗಳೂರು ಪೂರ್ವದ ಕಡೆ ಜನದಟ್ಟಣೆ ಕಡಿಮೆ ಆಗುವ ನಿರೀಕ್ಷೆಯಿದೆ. ಪ್ರತಿದಿನ ಸುಮಾರು 5 ರಿಂದ 6 ಲಕ್ಷ ಜನರು ಬೆಂಗಳೂರು ಮೆಟ್ರೋವನ್ನು ಬಳಸುತ್ತಾರೆ. ಬೈಯಪ್ಪನಹಳ್ಳಿ-ಕೆ.ಆರ್.ಪುರಂ ಮೆಟ್ರೋ ವಿಭಾಗವು ಸಂಪೂರ್ಣ ತೆರೆದರೆ, ಸುಮಾರು 50-60 ಪ್ರತಿಶತದಷ್ಟು ಜನರಿಗೆ ಅನುಕೂಲವಾಗಲಿದೆ.