ವಿದ್ಯುತ್ ತಿದ್ದುಪಡಿ ಮಸೂದೆ-2022 ವಾಪಸ್ ಪಡೆಯಬೇಕು. ಹೊಸ ಶಿಕ್ಷಣ ನೀತಿಯನ್ನು ರದ್ದು ಮಾಡಬೇಕು. ಮನರೇಗಾ ಉದ್ಯೋಗದ ದಿನಗಳನ್ನು ಹೆಚ್ಚಿಸಬೇಕು. ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುಚ್ಛಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಿಸಬೇಕು. ಸ್ವಾಮಿನಾಥನ್ ಶಿಪಾರಸ್ಸಿನಂತೆ ಕೃಷಿ ಉತ್ಪನ್ನಗಳಿಗೆ ಸಿ2+50% ಪ್ರಕಾರ ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು. ರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ-2023ಯನ್ನು ವಜಾಗೊಳಿಸಬೇಕು. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಒತ್ತಾಯಿಸಿದೆ. ಹಕ್ಕೊತ್ತಾಯಗಳ ಈಡೇರಿಕೆಗಾಗಿ ಒತ್ತಾಯಿಸಿ ನವೆಂಬರ್ 26ರಿಂದ28ರವರೆಗೆ ಮಹಾಧರಣಿ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದೆ.
ಬೆಂಗಳೂರಿನಲ್ಲಿ ನಡೆದ ‘ಸಂಯುಕ್ತ ಹೋರಾಟ – ಕರ್ನಾಟಕ’ದ ರಾಜ್ಯ ಸಮಾವೇಶದಲ್ಲಿ ಒಕ್ಕೂಟದ ಮುಖಂಡರು ನವೆಂಬರ್ 26ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಹಾಧರಣಿ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, “ಪಾರ್ಲಿಮೆಂಟಿನಿಂದ ಕೋಮುವಾದಿ ರಾಜಕಾರಣವನ್ನು ಹಿಮ್ಮೆಟ್ಟುಸಲು ಸಂವಿಧಾನದ ಮಾಲೀಕರಾದ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ದುಡಿಯುವ ಜನರು ಹಾಗೂ ಯುವಜನರು ಸಜ್ಜಾಗಬೇಕು. ದೇಶದಲ್ಲಿ ಕೇಂದ್ರ ಸರ್ಕಾರದ ದುಡಿಯುವ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಿರಂತರವಾಗಿ ಮುಂದುವರೆಯಬೇಕು” ಎಂದು ಕರೆಕೊಟ್ಟರು.
ಸಂಯುಕ್ತ ಕಿಸಾನ್ ಮೊರ್ಚಾ ರಾಷ್ಟ್ರೀಯ ನಾಯಕ ವಿಜು ಕೃಷ್ಣನ್ ಮಾತನಾಡಿ, “ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಕೃಷಿ ಸಾಲ, ಬೆಳೆ ಹಾಳಾದರೆ ಇನ್ಶುರೆನ್ಸ್ ಕೊಡಲಾಗತ್ತೆ, ಬೆಲೆ ಏರಿಕೆ ಹೆಚ್ವಳದಿಂದ ತತ್ತರಿಸುತ್ತಿರುವ ಪರಿಸ್ಥಿತಿಯನ್ನು ಸುಧಾರಿಸಲು ಒಂದು ಬಾರಿ ಅವಕಾಶ ಕೊಡಿ ಅಂತ ಅಧಿಕಾರಕ್ಕೆ ಬಂದದ್ದು ಮೋದಿ ಸರ್ಕಾರ. ಆದರೆ, ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದಿದೆ” ಎಂದು ಕಿಡಿಕಾರಿದರು.
“56 ಇಂಚಿನ ಎದೆಯವ ಮೋದಿ ಅನ್ನದಾತರಿಗೆ ಹೆದರಿ ಕ್ಷಮೆಯಾಚಿಸಿದ್ದು ಇತಿಹಾಸ. ಆದರೆ, ಅದೇ ರೈತರ ದೆಹಲಿ ಐತಿಹಾಸಿಕ ಹೋರಾಟವನ್ನು ಬಿತ್ತರಿಸಿದ ಕಾರಣಕ್ಕೆ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆ ಮೇಲೆ ಯುಎಪಿಎ ಪ್ರಕರಣ ದಾಖಲಿಸಿದ್ದಾರೆ. ಬಂಧಿಸಿ, ವಿಚಾರಣೆಗೆ ಒಳಪಡಿಸಿದವರನ್ನೆಲ್ಲ ‘ರೈತರ ಹೋರಾಟವನ್ನು ಸುದ್ದಿ ಮಾಡಿದ್ರಾ? ಗಲಭೆ ಕುರಿತ ಸುದ್ದಿಗಳು ಹಾಗೂ ಸಿಎಎ-ಎನ್‌ಆರ್‌ಸಿ ಹೋರಾಟಗಳ ಕುರಿತ ಸುದ್ದಿ ವರದಿ ಮಾಡಿದ್ರಾ’ ಅಂತ ದೆಹಲಿ ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಬಹುಶಃ ತುರ್ತು ಪರಿಸ್ಥಿತಿ ಕಾಲದಲ್ಲೂ ಮೋದಿ ಸರ್ಕಾರದ ಮಟ್ಟಕ್ಕೆ ಮಾಧ್ಯಮಗಳನ್ನು ಹತ್ತಿಕ್ಕುವ ಕೆಲಸ ಆಗಿರಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನ್ಯೂಸ್ ಕ್ಲಿಕ್ ಸುದ್ದಿ ಸಂಸ್ಥೆ ಮೇಲೆ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಐತಿಹಾಸಿಕ ದೆಹಲಿ ಹೋರಾಟದ ಬಗ್ಗೆ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮಾಡಿಲಾಗಿದೆ. ದೆಹಲಿ ರೈತ ಹೋರಾಟವನ್ನು ವಿದೇಶ ಕಂಪನಿಗಳು ಬೆಂಬಲಿಸಿ ನಡೆಸಿವೆ ಎಂದೆಲ್ಲ ಬಿಂಬಿಸಲಾಗಿದೆ. ಸರ್ಕಾರದ ಇಂತಹ ಹುನ್ನಾರಗಳನ್ನು ನಾವು ಖಂಡಿಸುತ್ತೇವೆ” ಎಂದು ಸಂಯುಕ್ತ ಹೋರಾಟ ಕರ್ನಾಟಕ ಹೇಳಿದೆ.
ಸಂಯುಕ್ತ ಹೋರಾಟ ಕರ್ನಾಟಕದ ಹಕ್ಕೊತ್ತಾಯಗಳು
- ರೈತರಿಗೆ ನೀಡುವ, ಬೀಜ, ರಸಗೊಬ್ಬರ, ಹಾಗೂ ವಿದ್ಯುತ್ ಚ್ಛಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಳವಾಗಬೇಕು. ರೈತರ ಉತ್ಪನ್ನಗಳಿಗೆ ಎಂ.ಎಸ್. ಸ್ವಾಮಿನಾಥನ್ ಶಿಪಾರಸ್ಸಿನ ಸೂತ್ರ, ಸಿ2+50% ಪ್ರಕಾರ ಕನಿಷ್ಟ ಬೆಂಬಲ ಬೆಲೆ ಹಾಗೂ ಖರೀದಿ ಖಾತರಿ ಒದಗಿಸುವ ಶಾಸನ ಜಾರಿ ಮಾಡಬೇಕು. ರೈತರ ಆತ್ಮಹತ್ಯೆ ತಡೆಯಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು.
- ರಾಷ್ಟ್ರೀಯ ಕನಿಷ್ಟ ವೇತನ ಮಾಸಿಕ 26,000 ರೂ. ನಿಗದಿಯಾಗಬೇಕು.
- ಕಾರ್ಪೊರೇಟ್ ಪರವಾದ ಪಿಎಂ ಫಸಲ್ ಭೀಮಾ ಯೋಜನೆಯನ್ನು ರದ್ದುಪಡಿಸಿ, ಹವಾಮಾನ ಬದಲಾವಣೆ, ಬರ, ಪ್ರವಾಹ, ಬೆಳೆ ರೋಗ ಮುಂತಾದ ವಿಕೋಪಗಳಿಗೆ ರೈತರಿಗೆ ಪರಿಹಾರ ಒದಗಿಸುವ, ಎಲ್ಲ ಬೆಳೆಗಳಿಗೂ ವಿಮೆ ಒದಗಿಸುವ, ಸಮಗ್ರ ಸಾರ್ವಜನಿಕ ವಿಮಾ ಯೋಜನೆಯನ್ನು ಜಾರಿಗೆ ತರಬೇಕು.
- ಎಲ್ಲ ರೈತರು/ಕೃಷಿ ಕೂಲಿಕಾರರನ್ನು ಸಾಲಭಾದೆಯಿಂದ ರಕ್ಷಿಸಲು ಸಮಗ್ರ ಸಾಲ ಮನ್ನಾ ಯೋಜನೆ ಜಾರಿಗೆ ತರಬೇಕು.
- ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಜಾರಿ ಮಾಡಬೇಕು. ಸಿಂಗು ಗಡಿಯಲ್ಲಿ ಹುತಾತ್ಮ ರೈತರ ಸ್ಮಾರಕ ನಿರ್ಮಿಸಲು ಜಾಗ ನೀಡಬೇಕು. ಹುತಾತ್ಮ ರೈತ ಕುಟುಂಬಕ್ಕೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು. ಹೋರಾಟ ಸಂದರ್ಭದಲ್ಲಿ ರೈತರ ಮೇಲೆ ಹಾಕಿರುವ ಎಲ್ಲ ಪೊಲೀಸ್ ಕೇಸ್‌ಗಳನ್ನು ವಾಪಸ್ಸು ಪಡೆಯಬೇಕು. ರೈತರ ಹತ್ಯಾಕಾಂಡ ನಡೆಸಿದ ಅಜಯ್ ಮೀಶ್ರ ತೇಣಿ ಯನ್ನು ಕೇಂದ್ರ ಮಂತ್ರಿ ಮಂಡಲದಿಂದ ತೆಗೆಯಬೇಕು.
- ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕು. ಮಂಜೂರಾಗಿರುವ ಎಲ್ಲ ಉದ್ಯೋಗಗಳನ್ನು ಭರ್ತಿ ಮಾಡಬೇಕು. ನಿರುದ್ಯೋಗಿ ಯುವಜನತೆಗೆ ಕೆಲಸ ಒದಗಿಸಲು, ಉದ್ಯೋಗ ಸೃಷ್ಟಿಸಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. 200 ದಿನಗಳಿಗೆ ವಿಸ್ತರಿಸಿ 600 ರೂ. ಕೂಲಿ ನಿಗದಿ ಮಾಡಬೇಕು.
- ಗೃಹ ಕೃತ್ಯಗಳ ಕೆಲಸಗಾರರು ಹಾಗೂ ಗೃಹ ಆಧಾರಿತ ಕೆಲಸಗಾರರಿಗೆ ಐಎಲ್‌ಒ ಸಮ್ಮೇಳನ ಶಿಪಾರಸ್ಸುಗಳನ್ನು ಖಾತರಿಪಡಿಸಲು ಸೂಕ್ತ ಕಾನೂನು ರಚಿಸಬೇಕು. ವಲಸೆ ಕಾರ್ಮಿಕರ ಕುರಿತು ಸಮಗ್ರ ಧೋರಣೆ ರೂಪಿಸಬೇಕು. ಈಗ ಇರುವ ಅಂತರ್ ರಾಜ್ಯ ವಲಸೆ ಕೆಲಸಗಾರರ (ಉದ್ಯೋಗ ನಿಯಂತ್ರಣ) ಕಾಯ್ದೆ-1979ಅನ್ನು ಸಾಮಾಜಿಕ ಸುರಕ್ಷೆ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಬಲಪಡಿಸಬೇಕು.
- ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಅನ್ನು ರದ್ದು ಮಾಡಿ, ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಮಾಡಬೇಕು. ಎಲ್ಲರಿಗೂ ಸಾಮಾಜಿಕ ಭದ್ರತೆ ಒದಗಿಸಬೇಕು.
- ಬೆಲೆ ಏರಿಕೆ ನಿಯಂತ್ರಿಸಬೇಕು. ಅಗತ್ಯ ವಸ್ತುಗಳಾದ ಆಹಾರ, ಔಷಧ, ಕೃಷಿ ಲಾಗುವಾಡು- ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿ ರದ್ದುಪಡಿಸಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಕೇಂದ್ರೀಯ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಬೇಕು.
- ಕೋವಿಡ್ ನೆಪದಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು, ಕ್ರೀಡಾಪಟುಗಳಿಗೆ ರದ್ದುಪಡಿಸಿದ್ದ ರೈಲ್ವೆ ಪ್ರಯಾಣ ರಿಯಾಯಿತಿಯನ್ನು ಪುನರ್ ಸ್ಥಾಪಿಸಬೇಕು.
- ಆಹಾರ ಭದ್ರತೆ/ಪೋಷಕಾಂಶ ಸುರಕ್ಷತೆಯನ್ನು ಖಾತರಿಪಡಿಸಬೇಕು. ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೆ ಬರಬೇಕು. ಮೂಲಭೂತ ಅಗತ್ಯ ವಸ್ತುಗಳನ್ನು ಪಿಡಿಎಸ್ ಮೂಲಕ ವಿತರಿಸಬೇಕು. ನೇರ ನಗದು ವರ್ಗಾವಣೆ ರದ್ದುಪಡಿಸಬೇಕು.
- ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಉಚಿತ ನೀರು ಮತ್ತು ನೈರ್ಮಲ್ಯವನ್ನು ಮೂಲಭೂತ ಹಕ್ಕಾಗಿ ಒದಗಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ-2020 ರದ್ದಾಗಬೇಕು.
- ಪ್ರತಿಯೊಬ್ಬರಿಗೂ ವಸತಿ ಹಕ್ಕನ್ನು ಖಾತರಿಪಡಿಸಬೇಕು. ವಸತಿ-ನಿವೇಶನಕ್ಕಾಗಿ ಭೂ ಸ್ವಾಧೀನ ನೀತಿ ಜಾರಿ ಮಾಡಬೇಕು.
- ಅರಣ್ಯ ಹಕ್ಕು ಕಾಯ್ದೆ-2006 ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಅರಣ್ಯಗಳನ್ನು ಕಾರ್ಪೊರೇಟ್ ಗೆ ಹಸ್ತಾಂತರಿಸಲು ಅವಕಾಶ ನೀಡಿರುವ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ-2023 ಹಾಗೂ ಜೀವ ವೈವಿಧ್ಯ ಕಾಯ್ದೆ ಮತ್ತು ನಿಯಮಗಳನ್ನು ರದ್ದುಪಡಿಸಬೇಕು. ಬಗರ್ ಹುಕುಂ ಸಾಗುವಳಿದಾರರು ಸೇರಿದಂತೆ ಎಲ್ಲಾ ಉಳುಮೆ ರೈತರಿಗೆ ಭೂಮಿ ಹಕ್ಕು ಖಾತರಿಪಡಿಸಬೇಕು. ಬಲವಂತದ ಭೂ ಸ್ವಾಧೀನ ನಿಲ್ಲಿಸಬೇಕು ಮತ್ತು ಪರಿಹಾರ ಕ್ರಮ ವೈಜ್ಞಾನಿಕ ಹಾಗೂ ರೈತ ಸ್ನೇಹಿಯಾಗಿರಬೇಕು.
- ಸಾರ್ವಜನಿಕ ಉದ್ದಿಮೆಗಳ ಹಾಗೂ ಸರ್ಕಾರಿ ಇಲಾಖೆಗಳ ಖಾಸಗೀಕರಣ ನಿಲ್ಲಬೇಕು. ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಯೋಜನೆ ರದ್ದಾಗಬೇಕು.
- ಖನಿಜ ಹಾಗೂ ಲೋಹ ಗಣಿಗಾರಿಕಾ ಕಾಯ್ದೆ ಗೆ ತಿದ್ದುಪಡಿ ತಂದು ಕಲ್ಲಿದ್ದಲು ಸೇರಿದಂತೆ ಗಣಿ ಕಂಪನಿಗಳ ಲಾಭದ ಶೇ.50 ರಷ್ಟನ್ನು ಆದಿವಾಸಿಗಳು, ರೈತರು ಮುಂತಾದ ಸ್ಥಳೀಯ ನಿವಾಸಿಗಳ ಅಭಿವೃದ್ಧಿಗೆ ಬಳಸಬೇಕು.
- ವಿದ್ಯುತ್ ತಿದ್ದುಪಡಿ ಮಸೂದೆ-2022 ಅನ್ನು ಸಂಸತ್ತಿನಿಂದ ವಾಪಸ್ಸು ಪಡೆಯಬೇಕು. ಯಾವುದೇ ಕಾರಣಕ್ಕೂ ಪ್ರೀ ಪೇಯ್ಡ್ ಮೀಟರ್ ಅಳವಡಿಸಬಾರದು.
- ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಿಯಮಿತವಾಗಿ ಆಯೋಜಿಸಬೇಕು.
- ನಾಲ್ಕು ಕಾರ್ಮಿಕ ಸಂಹಿತೆಗಳನ್ನು, ನಿಗದಿತ ಅವಧಿಗೆ ಮಾತ್ರ ಉದ್ಯೋಗ ಪದ್ದತಿಯನ್ನು ರದ್ದುಪಡಿಸಬೇಕು. ಕೆಲಸದ ಸ್ಥಳದಲ್ಲಿ ಸಮಾನತೆ ಹಾಗೂ ಸುರಕ್ಷಿತೆ ಖಾತರಿಪಡಿಸಬೇಕು. ಶ್ರಮವನ್ನು ಶಾಶ್ವತ ಖಾಯಂ ರಹಿತವಾಗಿ ದುಡಿಸಿಕೊಳ್ಳುವ ಪ್ರವೃತ್ತಿ ನಿಲ್ಲಬೇಕು. ಗೃಹ ಅಧಾರಿತ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಸ್ಥರು, ಚಿಂದಿ ಆಯುವವರು, ಮನೆಗೆಲಸಗಾರರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ, ಆಶಾ ಸೇರಿದಂತೆ ಯೋಜನಾ ಕಾರ್ಮಿಕರು, ಕೃಷಿ ಕೂಲಿಕಾರರು, ಅಂಗಡಿ/ಮಳಿಗೆಗಳ ಕಾರ್ಮಿಕರು, ಹಮಾಲಿ ಕಾರ್ಮಿಕರು, ಗೀಗ್ ಕಾರ್ಮಿಕರು, ಊದುಬತ್ತಿ/ಉಪ್ಪಿನಕಾಯಿ ಕಾರ್ಮಿಕರು, ಬೀಡಿ ಕಾರ್ಮಿಕರು, ಸೇಂದಿ ಕಾರ್ಮಿಕರು, ರಿಕ್ಷಾ ಎಳೆಯುವವರು, ಆಟೋ ರಿಕ್ಷಾ/ಟ್ಯಾಕ್ಸಿ ಚಾಲಕರು, ವಿದೇಶಿ ಕಾರ್ಮಿಕರು, ಮೀನುಗಾರ ಸಮುದಾಯ ಮುಂತಾದ ಎಲ್ಲಾ ರೀತಿಯ ಅಸಂಘಟಿತ ವಲಯದ ಕಾರ್ಮಿಕರನ್ನು ನೊಂದಾಯಿಸಿ, ಪಿಂಚಣಿ ಸೇರಿದಂತೆ ಸಮಗ್ರ ಸಾಮಾಜಿಕ ಸುರಕ್ಷೆಯನ್ನು ಒದಗಿಸಬೇಕು. ಐಸಿಡಿಎಸ್, ಅಕ್ಷರ ದಾಸೋಹ, ಆಶಾ ಮುಂತದಾ ಯೋಜನೆಗಳನ್ನು ಯಾವುದೇ ಸ್ವರೂಪದಲ್ಲಿ ಖಾಸಗೀಕರಣ ಮಾಡಬಾರದು.
- ಕಲ್ಯಾಣ ಮಂಡಳಿಯ ನಿಧಿ ಬಳಸಿಕೊಂಡು ಕಟ್ಟಡ ಕಾರ್ಮಿಕರಿಗೆ ಇ.ಎಸ್.ಐ. ಸೌಲಭವನ್ನು ಒದಗಿಸಬೇಕು. ಇ-ಶ್ರಮ್ ಪೋರ್ಟಲ್ ನಲ್ಲಿ ನೊಂದಾಯಿಸಿರುವ ಎಲ್ಲ ಕಾರ್ಮಿಕರಿಗೆ ಆರೋಗ್ಯ ಯೋಜನೆ, ತಾಯ್ತನದ ಆರೈಕೆ ಸೌಲಭ್ಯ, ಜೀವ ಹಾಗೂ ಅಂಗವೈಕಲ್ಯ ವಿಮೆಯನ್ನು ಒದಗಿಸಬೇಕು.
- ಸಂವಿಧಾನದ ಮೂಲಭೂತ ಮೌಲ್ಯಗಳಾದ ಅಭಿವ್ಯಕ್ತಿ ಸ್ವಾತಂತ್ರ‍್ಯ, ಭಿನ್ನಾಭಿಪ್ರಾಯ ಹೊಂದುವ ಹಕ್ಕು, ಧಾರ್ಮಿಕ ಸ್ವಾತಂತ್ರ‍್ಯ, ಸಾಂಸ್ಕೃತಿಕ -ಭಾಷೆ ವೈವಿಧ್ಯತೆ ಗೆ ಮನ್ನಣೆ, ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಒಕ್ಕೂಟ ರಚನೆ ಮುಂತಾದವುಗಳ ಮೇಲಿನ ಆಕ್ರಮಣವನ್ನು ನಿಲ್ಲಿಸಬೇಕು.