ನಗರದ ಎಂ.ಈರಣ್ಣ ವೃತ್ತದಲ್ಲಿ ತರಕಾರಿ ವ್ಯಾಪಾರ ಮುಂದುವರೆಸಲು ರವೀಂದ್ರ ಜಲ್ದಾರ ಸ್ನೇಹಿತರು ಹೈಕೋರ್ಟನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಆದ್ದರಿಂದ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಅಕ್ಟೋಬರ್ 11ರ ನಂತರ ಮಾರಟಗಾರರನ್ನು ತೆರವು ಗೊಳಿಸಬೇಕು ಎಂದು ಉಸ್ಮಾನೀಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಮಹಾವೀರ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರವೀಂದ್ರ ಜಲ್ದಾರ್ ಜನವಿರೋಧಿ ಕೆಲಸ ಮಾಡುತ್ತಲೇ ಬಂದಿದ್ದಾರೆ. ನಗರದ ಅಭಿವೃದ್ದಿಯನ್ನು ಕಡೆಗಣಿಸಿ ಸ್ವ-ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾದರೂ, ಪ್ರತಿಷ್ಟೆಗಾಗಿ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಕಳೆದ ಜುಲೈ ೨೩ರಂದು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ, ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟ ತೆರವುಗೊಳಿಸಲಾಗಿತ್ತು. ಆಗ ಸೆಪ್ಟಂಬರ್ ೨೬ರಂದು ಹೈಕೋರ್ಟಿನಿಂದ ತಡೆಯಾಜ್ಞೆ ತರಲಾಗಿತ್ತು. ಜಿಲ್ಲಾಧಿಕಾರಿಗಳು ನ್ಯಾಯಾಲಯಕ್ಕೆ ವರದಿ ನೀಡಿದ ನಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ. ಹೈಕೋರ್ಟ ಆದೇಶದಂತೆ ಅಕ್ಟೋಬರ್ ೧೧ರವರೆಗೆ ಮಾರಾಟಕ್ಕೆ ಅವಕಾಶ ನೀಡಿ, ನಂತರ ತೆರವಿಗೆ ಸೂಚಿಸಲಾಗಿದೆ,” ಎಂದರು.
ಮುಂದುವರೆದು, ನಗರದದ ಶಾಸಕರು ಅಭಿವೃದ್ಧಿಯನ್ನು ಕಡೆಗಣಿಸುತ್ತಿದ್ದು, ಜನರ ಸಮಸ್ಯೆಗಳಿಗೆ ನಮ್ಮ ಸರ್ಕಾರ ಇಲ್ಲ ಎಂದು ಹೇಳುತ್ತಿದ್ದಾರೆ. ಅವರು ಕೂಡಲೇ ರಾಜೀನಾಮೆ ನೀಡಿ, ಮನೆಯಲ್ಲಿ ಕುಳಿತುಕೊಳ್ಳಬೇಕು. ಶಾಸಕರಾಗಿ ಅಧಿಕಾರ ಹಿಡಿದು ಆರೂ ತಿಂಗಳು ಗತಿಸುತ್ತಿದ್ದರೂ, ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸುತ್ತಿಲ್ಲ. ನಗರದ ರಸ್ತೆಗಳು ಹದಗೆಟ್ಟು ಹೋಗಿವೆ. ಬೀದಿ ದೀಪಗಳಿಲ್ಲ, ನಗರ ಕತ್ತಲೆಯಲ್ಲಿದೆ. ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಕಸ ವಿಲೇವಾರಿಯೂ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಆದರೆ, ನಗರಸಭೆಯನ್ನು, ಮಹಾನಗರ ಪಾಲಿಕೆ ಮಾಡುವದಾಗಿ ಸುಳ್ಳು ಹೇಳುತ್ತಲೇ ಬಂದಿದ್ದಾರೆ. ೨೪ಗಂಟೆ ಕುಡಿಯುವ ನೀರು, ವಿಮಾನ ನಿಲ್ದಾಣ ಸೇರಿದಂತೆ ಬರೀ ಸುಳ್ಳು ಹೇಳಿ, ಜನರನ್ನ ದಿಕ್ಕುತಪ್ಪಿಸುತ್ತಿದ್ದಾರೆ. ತಾವು ಮಾತ್ರ ಐದ ನೂರು ಕೋಟಿ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಅಕ್ರಮ ಆಸ್ತಿ ಮಾಡಿರುವ ಶಾಸಕರ ವಿರುದ್ದ ಜನಪ್ರತಿನಿಧಿ ಕಾಯ್ದೆಯಡಿದ ದೂರು ನೀಡುವದಾಗಿ ಹೇಳಿದರು.
ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ವಿರುದ್ಧ, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ. ಇತ್ತೀಚೆಗಷ್ಟೇ ಆದಾಯ ತೆರಿಗೆ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಲಾಗಿದೆ. ಜಾರಿ ನಿರ್ದೇಶನಾಲಯ ಕೆಲವು ಮಾಹಿತಿಯನ್ನು ನೀಡುವಂತೆ ಕೇಳಿದೆ. ಪೂರ್ಣ ಮಾಹಿತಿ ಒದಗಿಸಿ ದೂರು ನೀಡುಲಾಗುವುದು ಎಂದು ಅವರು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಪ್ರಭುನಾಯಕ, ಉದಯಕುಮಾರ, ರಿಜ್ವಾನ್ ಇನ್ನಿತರರು ಉಪಸ್ಥಿತರಿದ್ದರು.