ಪರಿಶಿಷ್ಟ ಜಾತಿಗಳಲ್ಲಿ ಶೋಷಿತ ಸಮಾಜವಾಗಿರುವ ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ಜಾರಿಗೊಳಿಸಲು ಮುಂದಿನ ಅವಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಚಿತ್ರದುರ್ಗ ಮಾದಿಗ ಗುರುಪೀಠದ ಷಡಕ್ಷರಿ ಮುನಿಸ್ವಾಮೀಜಿ ಒತ್ತಾಯಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಜನಸಂಖ್ಯೆಯಲ್ಲಿ ಅತಿದೊಡ್ಡ ಸಮೂದಾಯಗಳಲ್ಲಿ ಒಂದಾಗಿರುವ ಮಾದಿಗ ಸಮೂದಾಯಕ್ಕೆ ಸಂವಿಧಾನ ಆಶಯದಂತೆ ಮೀಸಲಾತಿ, ಅಧಿಕಾರ ಹಂಚಿಕೆಯಾಗಿಲ್ಲ. ಅಂಬೇಡ್ಕರ ಆಶಯದಂತೆ ಮೀಸಲಾತಿ ನೀಡಬೇಕು. ಇತರೆ ಸಮೂದಾಯಗಳಂತೆ ಅಭಿವೃದ್ದಿ ಹೊಂದಲು ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಬೇಕು” ಎಂದರು.
“ಒಳಮೀಸಲಾತಿಗಾಗಿ ಸುಧೀರ್ಘ ಹೋರಾಟ ನಡೆಸುತ್ತಿದ್ದರೂ ಎಲ್ಲ ರಾಜಕೀಯ ಪಕ್ಷಗಳು ತಾರ್ಕಿಕ ಅಂತ್ಯ ಕಾಣಿಸಲು ಆಗಿಲ್ಲ. ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ಶಿಫಾರಸ್ಸುಗಳ ಜಾರಿಗೆ ಮುಂದಾಗುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಮಾಡಿರುವ ಶಿಫಾರಸ್ಸಿನಲ್ಲಿ ಕಾನೂನಾತ್ಮಕ ತೊಡಕಿದೆ. ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಮುಂದಿನ ಅಧಿವೇಶನದಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಬೇಕು” ಎಂದು ಒತ್ತಾಯಿಸಿದರು.
“ಐದು ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರಸ್ ಸರ್ಕಾರ ಆರನೇ ಗ್ಯಾರಂಟಿಯಾಗಿ ಮಾದಿಗ ಸಮೂದಯಕ್ಕೆ ಒಳಮೀಸಲಾತಿ ನೀಡಬೇಕು. ಯಾವ ಧರ್ಮವೂ ಜಾತಿಬೇಧ ಮಾಡಬಾರದು” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆದಿಜಾಂಬವ ಸೇವಾ ಟ್ರಸ್ಟ ಅಧ್ಯಕ್ಷ ರಾಮಣ್ಣ, ಬಿ.ಎಚ್. ಗುಂಡಳ್ಳಿ, ಯಮುನಪ್ಪ, ಬಾಬು ಕಮಲಾಪುರು ಉಪಸ್ಥಿತರಿದ್ದರು.
ವರದಿ: ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್, ರಾಯಚೂರು