ಬೆಂಗಳೂರಿನ ಉತ್ತರ ಭಾಗದಲ್ಲಿ ಉಪನಗರ ರೈಲು ಯೋಜನೆಗಾಗಿ (ಕಾರಿಡಾರ್4) ಸುಮಾರು 2,364 ಮರಗಳನ್ನು ಕಡಿಯಲು ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕೆ-ರೈಡ್) ಪ್ರಾಸ್ತಾವನೆ ಇಟ್ಟಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಎರಡು ವರ್ಷಗಳ ಹಿಂದೆ ಕೆ-ರೈಡ್ ಸಮೀಕ್ಷೆ ನಡೆಸಿದ್ದು, ರೈಲು ಯೋಜನೆ ಅನುಷ್ಠಾನಕ್ಕಾಗಿ ರೈಲು ಮಾರ್ಗಕ್ಕೆ 2,364 ಮರಗಳು ಅಡ್ಡಿಯಾಗಿವೆ ಎಂದು ಗುರುತಿಸಿದೆ. ಈ ಮರಗಳು ನೈಋತ್ಯ ರೈಲ್ವೆಗೆ ಸೇರಿದ ಸರ್ಕಾರಿ ಭೂಮಿ ಮತ್ತು ಖಾಸಗಿ ಆಸ್ತಿಗಳಲ್ಲಿ ಇವೆ ಎಂದು ಕಂಪನಿ ಹೇಳಿದೆ.
2,364 ಮರಗಳ ಪೈಕಿ ನೈರುತ್ಯ ರೈಲ್ವೆ ಮತ್ತು ಖಾಸಗಿ ಭೂಮಾಲೀಕರು ಈಗಾಗಲೇ ಚೆನ್ನಸಂದ್ರ ಮತ್ತು ಮುದ್ದೇನಹಳ್ಳಿ ನಿಲ್ದಾಣಗಳ ನಡುವೆ 226 ಮರಗಳನ್ನು ಕಡಿದಿದ್ದಾರೆ. ಹೆಚ್ಚುವರಿಯಾಗಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಒಳಚರಂಡಿ ಕೆಲಸಕ್ಕಾಗಿ 24 ಮರಗಳನ್ನು ಕತ್ತರಿಸಿದೆ ಎಂದು ಕಂಪನಿ ಹೇಳಿದೆ.
ಕಾರಿಡಾರ್-4ರ ಉದ್ದೇಶಿತ ರೈಲು ಯೋಜನೆಯು ಕಾರ್ಮೆಲಾರಂ, ಬೆಳ್ಳಂದೂರು, ಮಾರತಹಳ್ಳಿ, ದೊಡ್ಡನೆಕ್ಕುಂದಿ, ಕಗ್ಗದಾಸಪುರ, ಬೆನ್ನಿಗನಹಳ್ಳಿ, ಚನ್ನಸಂದ್ರ, ಹೊರಮಾವು, ಹೆಣ್ಣೂರು, ಥಣಿಸಂದ್ರ, ಹೆಗಡೆ ನಗರ ಮತ್ತು ಜಕ್ಕೂರು ಮುಂತಾದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ.
ಕತ್ತರಿಸಲು ಉದ್ದೇಶಿಸಲಾದ ಮರಗಳಲ್ಲಿ ವಿವಿಧ ಜಾತಿ ಮರಗಳಿದ್ದು, 30% ನೀಲಗಿರಿ ಮರಗಳಾಗಿವೆ. ಉಳಿದಂತೆ ತೆಂಗು, ಮಾವು, ಹಲಸು, ಪೊಂಗಮಿಯಾ, ಬೇವು, ಮಹೋಗಾನಿ, ರಾಯಲ್ ಪಾಮ್, ಜಾಮೂನ್, ಸುಬಾಬುಲ್, ಸಂಪಿಗೆ, ಸಿಲ್ವರ್ ಓಕ್, ಹುಣಸೆಹಣ್ಣು, ಫಿಕಸ್ ಮರಗಳು, ಅಶೋಕ ಮರಗಳು ಮತ್ತು ಇತರ ಸ್ಥಳೀಯ ಹಣ್ಣಿನ ಮರಗಳಿವೆ.
ಸಾರ್ವಜನಿಕರ ಆಕ್ಷೇಪಣೆಗಳನ್ನು ವೃಕ್ಷ ತಜ್ಞರ ಸಮಿತಿ ಪರಿಶೀಲಿಸಲಿದೆ. ಆಕ್ಷೇಪಣೆಗಳ ಪರಿಶೀಲನೆ ನಂತರ, ಮರಗಳ ಸ್ಥಳಾಂತರ ಅಥವಾ ಕಡಿಯುವಿಕೆಗೆ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.