ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೂರು ನೀಡಿದ್ದ ಅರಣ್ಯಾಧಿಕಾರಿ ವಿರುದ್ಧ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನಾಲಿಗೆ ಹರಿಬಿಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಮ್ಮಿನಡ್ಕ ಎಂಬಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಬಿಜೆಪಿ ಶಾಸಕ ಹರೀಶ್ ಪೂಂಜಾ ಸೂಚನೆಯ ಮೇರೆಗೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ಅವರು ದೂರು ನೀಡಿದ್ದರು. ದೂರು ನೀಡಿದ್ದರಿಂದ ಶಾಸಕ ಆಕ್ರೋಶಗೊಂಡಿದ್ದು, ಅರಣ್ಯಾಧಿಕಾರಿ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ ಮನೆಯನ್ನು ಅರಣ್ಯಾಧಿಕಾರಿಗಳು ತೆರವು ಮಾಡಿದ್ದರು. ಈ ವಿಚಾರ ಜಟಾಪಟಿಗೆ ತಿರುಗಿದ್ದರಿಂದ ಸ್ಥಳದಲ್ಲಿ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಧರ್ಮಸ್ಥಳ ಪೊಲೀಸ್ ಅಧಿಕಾರಿಗಳು ಮೂರು ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನೇಮಿಸಿದ್ದಾರೆ.
ನಿರ್ಮಾಣವಾಗುತ್ತಿದ್ದ ಮನೆಯನ್ನು ಅಡಿಪಾಯ ಸಹಿತ ಅರಣ್ಯಾಧಿಕಾರಿಗಳು ತೆರವುಗೊಳಿಸಿದ ಮಾಹಿತಿ ತಿಳಿದು, ಸ್ಥಳಕ್ಕೆ ಧಾವಿಸಿದ ಶಾಸಕ ಹರೀಶ್ ಪೂಂಜಾ, ಅರಣ್ಯ ಅಧಿಕಾರಿಗಳ ಎದುರೇ ಮತ್ತೆ ಮನೆ ನಿರ್ಮಿಸಲು ಸೂಚಿಸಿದ್ದಾರೆ. ಹೀಗಾಗಿ, ಸೋಮವಾರ ಕೂಡ ತೆರವು ಕಾರ್ಯಾಚರಣೆಗೆ ತೆರಳಿದ ಅರಣ್ಯಾಧಿಕಾರಿಗಳ ವಿರುದ್ಧ ಬಿಜೆಪಿಗರು ಸಿಡಿಮಿಡಿಗೊಂಡಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸುಳ್ಯ ಶಾಸಕಿ ಭಗಿರಥಿ ಜಿ ಮುರುಳ್ಯ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಂಗಳೂರು ಉತ್ತರ ಶಾಸಕ ಭರತ್ ವೈ ಶೆಟ್ಟಿ, ಬೆಳ್ತಂಗಡಿ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ.