ಕೃಷಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಗದಗ ಜಿಲ್ಲೆಯ ಮಂಡರಗಿಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದಾರೆ.
ಮುಂಡರಗಿ ತಾಲೂಕಿನಲ್ಲಿ ಕೃಷಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಶಿವಾನಂದ ಇಟಗಿ, “ಮುಂಡರಗಿ ಭಾಗದ ಕೃಷಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಈ ಕುರಿತು ಹಿಂದೆಯೂ ಪ್ರತಿಭಟನೆ ಮಾಡಿದ್ದೆವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕರೆಂಟ್ ಸರಿಯಾಗಿ ಕೊಡದಿರುವುದರಿಂದ ಜಮೀನಿನಲ್ಲಿರುವ ಬೆಳೆಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಬೆಳೆ ಒಣಗುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಕಂಬಳಿ ಮಾತನಾಡಿ, “ಕೂಡಲೇ ಜಿಲ್ಲೆ ಹಾಗೂ ಹುಬ್ಬಳ್ಳಿಯ ಹೆಸ್ಕಾಂ ಅಧಿಕಾರಿಗಳು ಹಾಗೂ ಶಾಸಕರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ರೈತರ ಜಮೀನುಗಳಿಗೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಂಡರಗಿ ತಾಲೂಕು ರೈತ ಸಂಘ ಮುಖಂಡರು ರೈತರು, ಪಕೀರಪ್ಪ ಬಳ್ಳಾರ, ಕೋಟೆಪ್ಪ ಚಿಕ್ಕಣ್ಣವರ, ಪರಸಪ್ಪ ಗದಗಿನ, ಕಿಟ್ಟಪ್ಪ ಮೋರನಾಳ ಹಾಗೂ ಈರಪ್ಪ ಸಿರಿ, ಬಸವರಾಜ ಗಡಾದ, ದ್ಯಾಮಣ್ಣ ಮಸಾಲಿ, ಕನಕಪ್ಪ ಕುರಿ ಹಾಗೂ ರೈತ ಪರ ಸಂಘಟನೆಗಳ ಮುಖಂಡರು ರೈತರು ಉಪಸ್ಥಿತರಿದ್ದರು.