ಮಂಗಳೂರು ನಗರದ ಪಿವಿಎಸ್ ವೃತ್ತದಲ್ಲಿ ಬಸ್ ಹತ್ತಲು ಹೊರಟಿದ್ದ ಮಹಿಳಾ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಖಾಸಗಿ ಬಸ್ ನಿರ್ವಾಹಕ ಹಾಗೂ ಚಾಲಕನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಹ ಪ್ರಯಾಣಿಕರ ಎದುರು ಕಂಡಕ್ಟರ್ ತಮಗೆ ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ವಕೀಲೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೇರಳಕಟ್ಟೆ ಸಮೀಪದ ಜಲಾಲ್‌ಬಾಗ್ ನಿವಾಸಿಯಾಗಿರುವ ಕೆ ಮುಫೀದಾ ರಹ್ಮಾನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
“ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮುಫೀದಾ ರಹ್ಮಾನ್ ಅವರು ಪಿವಿಎಸ್ ಸರ್ಕಲ್ ಬಳಿ ಬೋಂದೆಲ್‌ನಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುವ ರೂಟ್ ನಂಬರ್ 19ರ ‘ಆ್ಯಶೆಲ್’ ಎಂಬ ಹೆಸರಿನ ಖಾಸಗಿ ಬಸ್‌ಗೆ ಹತ್ತುವ ವೇಳೆ ಚಾಲಕನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದರು” ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಪಡಿತರ ಚೀಟಿ ತಿದ್ದುಪಡಿ; ಇನ್ನೂ ಬಗೆಹರಿಯದ ಸರ್ವರ್ ಸಮಸ್ಯೆ
“ತಾನು ಬಸ್ಸಿನಿಂದ ಕೆಳಕ್ಕೆ ಬೀಳುವ ಸ್ಥಿತಿಯಲ್ಲಿದ್ದು, ಚೀರಾಟ ಆರಂಭಿಸಿದೆ. ಬಳಿಕ ಕಂಡೆಕ್ಟರ್ ಉಡಾಫೆಯಾಗಿ ಮಾತನಾಡಿದ್ದು, ಅವಾಚ್ಯವಾಗಿ ತನ್ನನ್ನು ನಿಂದಿಸಿದ್ದಾರೆ. ಅಲ್ಲದೆ ಬಸ್ಸಿನಿಂದ ಇಳಿಯುವವರೆಗೂ ಧರ್ಮವನ್ನು ಉಲ್ಲೇಖಿಸಿ ನಿಂದಿಸಿದ್ದು, ಮಾನಸಿಕ ಕಿರುಕುಳ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ವಕೀಲೆ ಮುಫೀದಾ ರಹ್ಮಾನ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ ಖಾಸಗಿ ಬಸ್ ನಿರ್ವಾಹಕ ಮತ್ತು ಚಾಲಕನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.