ಸನಾತನ ಎಂದರೆ ಏನೋ ನಿಗೂಢತೆ ಇರಬೇಕೆಂಬ ತವಕ ಅನಗತ್ಯ. ಸನಾತನ ಧರ್ಮದ ರಕ್ಷಣೆಗೆ ಕೆಲವರು ಧಾವಿಸಿದ್ದಾರೆ. ಜನರ ತಲೆ ಕೆಡಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಪೊಲೀಸರ ರಕ್ಷಣೆ ಪಡೆದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಸನಾತನ ಧರ್ಮಕ್ಕೆ ಬಂದಿದೆ! ಇದು ನಿಜಕ್ಕೂ ದೌರ್ಭಾಗ್ಯ ಎಂದು ಹಿರಿಯ ಚಿಂತಕ ಡಾ. ಜಿ ರಾಮಕೃಷ್ಣ ಹೇಳಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ ಅಂಗಳ ಸಾಹಿತ್ಯ ಬಳಗ, ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಈದಿನ.ಕಾಮ್ ಸಹಯೋಗದಲ್ಲಿ ಸನಾತನ ಧರ್ಮದ ಕುರಿತು ‘ಭಾರತದಲ್ಲಿ ಮಾನವತೆ ವಿಕಾಸಕ್ಕೆ ಇರುವ ಸವಾಲುಗಳು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸನಾತನ ಧರ್ಮದ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವವರು ಹಾಗೂ ಧರ್ಮದ ಹೆಸರಿನಲ್ಲಿ ಕಿರುಕುಳ ನೀಡುವವರಿಂದ ರಕ್ಷಣೆ ಅತ್ಯಗತ್ಯವಾಗಿ ಸಿಗಬೇಕಿದೆ. ಸನಾತನ ಧರ್ಮ ವಿಚಾರ ಮಾತನಾಡುವಾಗ ಮಾರಕಾಸ್ತ್ರಗಳ ಬಳಸುವಿಕೆಯ ಹೇಳಿಕೆ ನೀಡಲಾಗುತ್ತಿದೆ. ಕಡಿ, ಬಡಿ, ಹೊಡಿ ಅನ್ನುವುದು ಈ ಸಮಾಜಕ್ಕೆ ಶೋಭೆ ತರುವುದಿಲ್ಲ. ಅಂತಹ ವ್ಯಾಘ್ರ ಮನಸ್ಥಿತಿಯನ್ನು ನಿರಾಕರಣೆ ಮಾಡುವುದು ಸಮಾಜಕ್ಕೆ ಆರೋಗ್ಯಕರ” ಎಂದರು.
“ದಲಿತಾದಿಗಳ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ಕ್ರೌರ್ಯಗಳ ನಡುವೆ, ಸಂವಿಧಾನದ ಆಶಯ ಮತ್ತು ಆಚರಣೆಯು ನಮ್ಮ ನಡೆಯಾಗಬೇಕು. ಸಮಾನತೆಯ ಸಮಾಜ ಸೃಷ್ಟಿಯಾಗುವುದು ಎಲ್ಲರಿಗೂ ಹಿತ” ಎಂದು ಅಭಿಪ್ರಾಯಪಟ್ಟರು.
“ಸನಾತನ ಹೆಸರಿನಲ್ಲಿ ದಲಿತರ, ಶೋಷಿತರ, ಹಿಂದುಳಿದವರ ಮೇಲೆ ಶೋಷಣೆ ಆಗುತ್ತಿದೆ. ಯಾವುದೇ ವರ್ಗಕ್ಕೂ ಅದರಿಂದ ನ್ಯಾಯ ದೊರೆತಿಲ್ಲ. ಬದಲಿಗೆ ಅಂತರ ಹೆಚ್ಚುವಂತೆ ಮಾಡಿದೆ. ಸಮಾಜದಲ್ಲಿ ಸಮಾನತೆ ಇಲ್ಲದಂತೆ ಮಾಡಿದೆ. ನಮ್ಮಲ್ಲಿ ನಮ್ಮವರೇ ನಮ್ಮವರಲ್ಲ ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ವಿಷಾಧ ವ್ಯಕ್ತಪಡಿಸಿದರು.
ಹಿರಿಯ ಲೇಖಕರ ನಾ ದಿವಾಕರ್ ಮಾತನಾಡಿ, “ನಾವೆಲ್ಲ ಇರುವ ಸಮಾಜದಲ್ಲಿ ನಾವೆಲ್ಲ ಒಂದೇ ಅನ್ನುವ ಮನಸ್ಥಿತಿ ಬರಬೇಕು. ಯಾರದ್ದೋ ದಾಕ್ಷಿಣ್ಯಕ್ಕೆ ಇನ್ಯಾರದ್ದೋ ಮನುಸ್ಮೃತಿ ಹೇರಿಕೆಗೆ ಒಳಗಾಗಬಾರದು. ಇಲ್ಲಿ ಸಮಾನತೆಯ ಬದುಕು ನಮ್ಮನ್ನೆಲ್ಲ ಉಳಿಸುತ್ತದೆ. ನಮಗೆ ನಮ್ಮವರಿಂದಲೇ ವ್ಯತಿರಿಕ್ತ ಭಾವನೆ ಉಂಟುಮಾಡಿ ದೂರ ಇರುವಂತಹ ಮನುವಾದಿ ಸನಾತನ ನಮಗೆ ಪೂರಕವಲ್ಲ” ಎಂದರು.
ಹಿರಿಯ ಹೋರಾಟಗಾರ್ತಿ ಈ ರತಿರಾವ್ ಮಾತನಾಡಿ, “ಸನಾತನ ಧರ್ಮ ಆಗಲಿ, ಯಾವುದೇ ಧರ್ಮ ಆಗಲಿ ಹೆಣ್ಣಿಗೆ ಸ್ವಾತಂತ್ರ್ಯ ನೀಡಿಲ್ಲ. ಸನಾತನ ಧರ್ಮ ಹೆಣ್ಣನ್ನು ಶೋಷಿಸಿವೆಯೇ ಹೊರತು, ಹೆಣ್ಣು ಶೋಷಣೆ ಮುಕ್ತವಾಗಿ ಸಮಾಜದಲ್ಲಿ ಇರಲು ಬಿಟ್ಟಿಲ್ಲ. ಮಾತನಾಡಲು ಬಿಟ್ಟಿಲ್ಲ. ಹೆಣ್ಣಿನ ಮೇಲೆ ಸನಾತನ ಕಟ್ಟುಪಾಡುಗಳನ್ನು ಹೇರಿದೆಯೇ ವಿನಃ, ಸಮಾಜದಲ್ಲಿ ಸ್ವತಂತ್ರ ಬದುಕಿಗೆ ಅವಕಾಶ ನೀಡಿಲ್ಲ. ನಾವು ಎಲ್ಲರಂತೆ ಇದ್ದೇವೆ ಅಂದ್ರೆ, ಅದಕ್ಕೆ ಬಾಬಾ ಸಾಹೇಬರು ಕೊಟ್ಟಂತಹ ಸಂವಿಧಾನ ಕಾರಣ” ಎಂದರು.
ವೇದಿಕೆಯಲ್ಲಿ ಪತ್ರಕರ್ತ ಜಿ ಮೋಹನ್, ಸಂಶೋಧಕರ ಸಂಘದ ಅಧ್ಯಕ್ಷ ಮಹೇಶ್ ಸಿ, ಅಂಗಳ ಸಾಹಿತ್ಯ ಬಳಗದ ಸಂಜಯ್ ಕುಮಾರ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪರಂಜ್ಯೋತಿ, ಕಾರ್ಯದರ್ಶಿ ಕಲ್ಲಳ್ಳಿ ಕುಮಾರ್, ಸಂಶೋಧಕ ವಿದ್ಯಾರ್ಥಿ ವರಳ್ಳಿ ಆನಂದ್ ಉಪಸ್ಥಿತರಿದ್ದರು.