ಪೂನಾ ಒಪ್ಪಂದದಂತೆ ಪರಿಶಿಷ್ಟ ಜಾತಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಡಾ ಬಿ ಆರ್ ಅಂಬೇಡ್ಕರ್ ಆಶಯಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ. ಸ್ವತಃ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವನ್ನು ಸರಿಪಡಿಸಲು ಶೇ. 15ರಷ್ಟು ಹಣವನ್ನು ಮರಳಿಸಬೇಕು. ಇಲ್ಲದೇ ಹೊದಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ಡಾ ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ದೇವಮಿತ್ರ ಹೇಳಿದರು.
ರಾಯಚೂರಿನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಅವರು ಮಾತನಾಡಿದರು. “ಅಸ್ಪೃಶ್ಯತೆ ಆಚರಣೆ ನಿರ್ಮೂಲನೆ ಮಾಡಿ, ಪ್ರತ್ಯೇಕ ಮತದಾನ ಹಕ್ಕನ್ನು ಡಾ. ಬಿ ಆರ್ ಅಂಬೇಡ್ಕರ್ ಪಡೆದುಕೊಂಡಿದ್ದರು. ಆದರೆ, ಮಹಾತ್ಮ ಗಾಂಧೀಜಿ ಇದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರಿಂದ ಪರಿಶಿಷ್ಟರಿಗೆ ಎರಡು ಮತದಾನದ ಅವಕಾಶ ತಪ್ಪಿತು. 1912ರಿಂದ 1932ರವರೆಗೆ ಡಾ ಬಿ ಆರ್ ಅಂಬೇಡ್ಕರ್ ಹೋರಾಟ ನಡೆಸಿ ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನದ ಹಕ್ಕನ್ನು ಬ್ರಿಟಿಷರಿಂದ ಪಡೆದಿದ್ದರು” ಎಂದು ಹೇಳಿದರು.
“ಗಾಂಧೀಜಿ ಅಸ್ಪೃಶ್ಯರ ಪ್ರತ್ಯೇಕ ಮತದಾನ ಹಕ್ಕಿಗೆ ವಿರೋಧಿಸಿದರು. ಪೂನಾ ಒಪ್ಪಂದದಂತೆ ಅಸ್ಪಶ್ಯ ಸಮುದಾಯಗಳಿಗೆ ಮೀಸಲಾತಿ ನೀಡಲು ತೀರ್ಮಾನಿಸಲಾಯಿತು. ಆದರೆ, ಮೀಸಲಾತಿ ಸದುಪಯೋಗ ಪಡೆದ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಅಸ್ಪೃಶ್ಯತೆ ಮತ್ತು ಬಡತನ ನಿರ್ಮೂಲನೆಗೆ ಪ್ರಯತ್ನಿಸದೆ ಸಮುದಾಯಕ್ಕೆ ಮೋಸ ಮಾಡಿದ್ದಾರೆಂದು ಸ್ವತಃ ಅಂಬೇಡ್ಕರ್ ಅವರೇ ಹೇಳಿದ್ದರು” ಎಂದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಪಡಿತರ ಚೀಟಿ ತಿದ್ದುಪಡಿ; ಇನ್ನೂ ಬಗೆಹರಿಯದ ಸರ್ವರ್ ಸಮಸ್ಯೆ
“ಮೀಸಲಾತಿ ಪಡೆದವರಿಂದಲೇ ಆಗುತ್ತಿರುವ ವಂಚನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಹಣ ಮರಳಿಸಲು ಹೋರಾಟ ನಡೆಸಲಾಗುತ್ತದೆ. ಮೀಸಲಾತಿ ಅನುಭವಿಸುತ್ತಿರುವವರು ಮರಳಿ ಡಾ ಬಿ ಆರ್ ಅಂಬೇಡ್ಕರ್ ಅವರ ಋಣ ತೀರಿಸಬೇಕು. ಇಲ್ಲದೇ ಹೋದಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಅಸ್ಪೃಶ್ಯ ನಿರ್ಮೂಲನೆ ಬಳಸಲು ದೂರು ಸಲ್ಲಿಸಲಾಗುತ್ತದೆ” ಎಂದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿ ಎಂ ನಾರಾಯಣ ವಕೀಲ, ಮಹಾಂತೇಶ ಕುಮಾರ ಮಿತ್ರ, ಮದನಕುಮಾರ ಮಿತ್ರ ಇದ್ದರು.