ಸಾಂಪ್ರದಾಯಿಕ ಬೆಳೆಗಳಿಗೆ ಅಂತ್ಯ ಹಾಡಿ ವಾಣಿಜ್ಯ ಬೆಳೆಯತ್ತ ಮುಖ ಮಾಡಿದ ಯುವ ರೈತ ತಮ್ಮ ಹೊಲದಲ್ಲಿಚೆಂಡು ಹೂ ಬೆಳೆದಿದ್ದು ಲಾಭದ ನಿರೀಕ್ಷೆಯಲ್ಲಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಅಹ್ಮದಾಬಾದ್ ಗ್ರಾಮದ ಯುವ ರೈತ ಅಮರ್ ಶಿಂಧೆ ಓದಿದ್ದು ಪಿಯುಸಿ, ನಂತರ ಓದಿನ ಕಡೆಗೆ ಆಸಕ್ತಿ ತೋರದೆ ತಮ್ಮ ಆರು ಎಕರೆ ಸ್ವಂತ ಜಮೀನಿನಲ್ಲಿ ವಿವಿಧ ವಾಣಿಜ್ಯ ಬೆಳೆಗಳ ಕೃಷಿ ಕೈಗೊಳ್ಳುವ ಮೂಲಕ ಹೆಚ್ಚಿನ ಆದಾಯ ಕಂಡುಕೊಂಡು ಯಶಸ್ವಿಯಾಗಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
“ಮಹಾರಾಷ್ಟ್ರದ ಔರಾದ ಶಹಜಾನಿಯಿಂದ ಅಷ್ಟಗಂಧ ತಳಿಯ 9 ಸಾವಿರ ಬೀಜ ಖರೀದಿಸಲಾಗಿದೆ. 3-4 ರೂಪಾಯಿಗೆ ಒಂದರಂತೆ ಖರೀದಿಸಲಾಗಿದೆ. ಕಳೆದ ಜುಲೈನಲ್ಲಿ ಒಂದೂವರೆ ಎಕರೆ ಜಮೀನಿನಲ್ಲಿ ನಾಟಿ ಹಚ್ಚಿದ್ದು ಎರಡು ತಿಂಗಳಿಗೆ ಇಳುವರಿ ಬರುತ್ತದೆ. ಚೆಂಡು ಹೂವು ಬೆಳೆಯಲು ಭೂಮಿ ಹದ, ಬಿತ್ತನೆ, ಔಷಧ ಸಿಂಪಡಣೆ ಸೇರಿದಂತೆ ಒಟ್ಟು 1.50 ಲಕ್ಷ ಖರ್ಚಾಗಿದೆ ಎನ್ನುತ್ತಾರೆ” ಯುವ ರೈತ ಅಮರ್ ಶಿಂಧೆ.
ನಿರೀಕ್ಷೆಯಂತೆ ಬೆಲೆ ಇಲ್ಲ
“ಸೆಪ್ಟೆಂಬರ್ ತಿಂಗಳಿಂದ ಇಳುವರಿ ಬರಲು ಪ್ರಾರಂಭವಾಗಿತ್ತು, ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಹೈದರಾಬಾದ್ ಮಾರುಕಟ್ಟೆಗೆ ಸಾಗಾಟ ಮಾಡಲಾಗಿತ್ತು. ಆದರೆ ಕೆ.ಜಿ.ಚೆಂಡು ಹೂವಿಗೆ 20, 30 ಹಾಗೂ 40 ರೂ.ಗೆ ಮಾರಾಟವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ ನಿರೀಕ್ಷೆಯಂತೆ ಬೆಲೆ ಸಿಗದ ಪರಿಣಾಮ ಹೆಚ್ಚಿನ ಆದಾಯ ಸಿಗಲಿಲ್ಲ. ಸದ್ಯ ಹೊಲದಲ್ಲಿ ತುಂಬು ಇಳುವರಿ ಬರುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲ. ಕೆ.ಜಿ. ಚೆಂಡು ಹೂವಿಗೆ ಈಗ ಬರೀ ಇಪ್ಪತ್ತು, ಮೂವತ್ತು ರೂಪಾಯಿ ಅಷ್ಟೇ ಇದೆ. ಇದರಿಂದ ಹೂವು ಕೀಳಲು, ವಾಹನ ಸಾಗಾಟಕ್ಕೆ ಖರ್ಚಾದ ವೆಚ್ಚವೂ ಸರದೂಗಿಸಲು ಆಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ತಿಂಗಳಲ್ಲಿ ಎರಡು ಅಥವಾ ಮೂರು ಬಾರಿ ಹೂ ಕಟಾವಿಗೆ ಬರುತ್ತದೆ. ಒಂದು ಸಲ ಹೂ ಕಟಾವು ಮಾಡಿದರೆ 8 ರಿಂದ 10 ಕ್ವಿಂಟಾಲ್ ಬರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದ ಕಾರಣ ಬೆಳೆ ಕಟಾವು ಮಾಡಲಿಲ್ಲ. ಮುಂಬರುವ ದಸರಾ, ದೀಪಾವಳಿವರೆಗೂ ಇಳುವರಿ ಬರುತ್ತದೆ. ದಸರಾ, ದೀಪಾವಳಿ ಹಬ್ಬದಲ್ಲಿ ಉತ್ತಮ ಬೆಲೆ ದೊರೆತರೆ ಆದಾಯ ಸಿಗಬಹುದು” ಎಂದು ಹೂವು ಬೆಳೆಗಾರ ಅಮರ್ ಶಿಂಧೆ ʼಈದಿನ.ಕಾಮ್ʼ ಗೆ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ
“ನಮ್ಮ ಹೊಲದಲ್ಲಿ ಈ ಹಿಂದೆ ಸೋಯಾಬಿನ್, ತೊಗರಿ, ಉದ್ದು ಸೇರಿದಂತೆ ಇತರೆ ಸಾಂಪ್ರದಾಯಿಕ ಬೆಳೆಗಳು ಬೆಳೆಯುತ್ತಿದ್ದರು. ನಾನು ಕೃಷಿಗೆ ತೊಡಗಿಸಿಕೊಂಡ ನಂತರ ಪೂರ್ಣ ವಾಣಿಜ್ಯ ಕೃಷಿ ಮಾಡುತ್ತಿದ್ದೇವೆ. ಒಟ್ಟು ಆರು ಎಕರೆಯಲ್ಲಿ ಹೂವು, ಶುಂಠಿ ಸೇರಿದಂತೆ ತರಕಾರಿ ಬೆಳೆಯುತ್ತೆ. ಕಳೆದ ಐದಾರು ವರ್ಷಗಳಿಂದ ಚಂಡು ಹೂ ಬೆಳೆಯುತ್ತಿದ್ದೇನೆ. ಆದರೆ ತೋಟಗಾರಿಕೆ ಇಲಾಖೆಯಿಂದ ಯಾವುದೇ ಸಹಾಯಧನ ದೊರಕಲಿಲ್ಲ. ಹಲವು ಬಾರಿ ತೋಟಗಾರಿಕೆ ಇಲಾಖೆಯ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಿದರೂ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸ್ವಂತ ಖರ್ಚಿನಲ್ಲೇ ಎಲ್ಲಾ ಬೆಳೆ ಬೆಳೆಯುತ್ತೇವೆ. ಇಲಾಖೆಯಿಂದ ಸಲಹೆ ಮಾರ್ಗದರ್ಶನ ನೀಡಿ ಸಹಾಯಧನ ನೀಡಿದರೆ ಇನ್ನಷ್ಟು ಹೆಚ್ಚಿನ ಗಳಿಸಲು ಸಾಧ್ಯ” ಎಂದು ಅಮರ ಒತ್ತಾಯಿಸಿದರು.
ಈ ಬಗ್ಗೆ ಭಾಲ್ಕಿ ತಾಲ್ಲೂಕು ತೋಟಗಾರಿಕೆ ಇಲಾಖೆ ಅಧಿಕಾರಿ ಮಾರುತಿ ಈದಿನ.ಕಾಮ್ ದೊಂದಿಗೆ ಮಾತನಾಡಿ, ” ನಾನು ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿರುವೆ, ಈ ಬಗ್ಗೆ ಮಾಹಿತಿ ಪಡೆದು ಖುದ್ದು ಜಮೀನಿಗೆ ಭೇಟಿ ನೀಡುವೆ, ತೋಟಗಾರಿಕೆ ಕೃಷಿಯಲ್ಲಿ ಹೂ ಬೆಳೆಯುವ ರೈತರಿಗಾಗಿ ಇರುವ ಸಹಾಯಧನ ಒದಗಿಸುವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮದ್ಯ ಮಾರಾಟಕ್ಕೆ ಪರವಾನಗಿ | ಜೀವ್ನ ಬರ್ಬಾದ್ ಆಗ್ತದೆ ಎನ್ನುತ್ತಿರುವ ಮಹಿಳೆಯರು
ತೋಟಗಾರಿಕೆ ಕೃಷಿ ಮಾಡುವವರಿಗೆ ಇಲಾಖೆಯಿಂದ ಹಲವಾರು ಯೋಜನೆಗಳಿದ್ದರೂ ಪ್ರಗತಿಪರ ಯುವ ರೈತರಿಗೆ ದಕ್ಕದೇ ಇರುವುದು ವಿಪರ್ಯಾಸವೇ ಸರಿ. ಸಂಬಂಧಪಟ್ಟ ಅಧಿಕಾರಿಗಳು ಇಂಥ ಯುವ ರೈತರಿಗೆ ಸೂಕ್ತ ಮಾರ್ಗದರ್ಶನ ಒದಗಿಸಿದರೆ ಕೃಷಿಯಲ್ಲಿ ಹೆಚ್ಚಿನ ಜನರು ತೊಡಗಿಸಿಕೊಳ್ಳಲು ಸಾಧ್ಯ ಎನ್ನುವುದು ರೈತರ ಅಭಿಪ್ರಾಯ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.