ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಎರ್ಲಪಾಡಿ ಬಳಿಯ ಗೋಮಾಳದಲ್ಲಿ ನಿರ್ಮಾಣವಾಗುತ್ತಿರುವ ಪರಶುರಾಮ ಥೀಮ್ ಪಾರ್ಕ್ ಯೋಜನೆ ಕೈಬಿಡಬೇಕು. ಯೋಜನೆಯಲ್ಲಿನ ಅಕ್ರಮಗಳ ತನಿಖೆಗೆ ಸಮಿತಿ ರಚನೆ ಮಾಡಬೇಕು ಎಂದು ಕೋರಿ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಮುತಾಲಿಕ್ ಹಾಗೂ ಮತ್ತಿತರರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, “ಅರ್ಜಿಯಲ್ಲಿನ ಎಲ್ಲ ಅಂಶಗಳು ಅರ್ಜಿದಾರರ ಊಹೆಯಂತಿವೆ. ಇದೊಂದು ಸಾರಾಸಗಟಾಗಿ ತಳ್ಳಿಹಾಕುವಂತಹ ಅರ್ಜಿ” ಎಂದು ಅಭಿಪ್ರಾಯಪಟ್ಟಿದೆ.
“ಗೋವುಗಳನ್ನು ಸಾಕದವರು, ಗೋಮಾಳ ರಕ್ಷಣೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವೇ ಇಲ್ಲ. ಅರ್ಜಿದಾರರು ಗೋವುಗಳನ್ನು ಸಾಕಿದ್ದಾರೆಯೇ” ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅರ್ಜಿದಾರರನ್ನು ಮೌಖಿಕವಾಗಿ ಪ್ರಶ್ನಿಸಿದ್ದಾರೆ.
ಎರ್ಲಪಾಡಿಯ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದೆ. ಪಾರ್ಕ್ ನಿರ್ಮಾಣಕ್ಕೆ ನಿಗದಿಪಡಿಸಿರುವ ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೇ ಸಂಖ್ಯೆ 329/1ರ 1.58 ಎಕರೆ ಭೂಮಿ ಗೋಮಾಳ. ಪರುಶುರಾಮನ ಪ್ರತಿಮೆಗೆ ಕಳಪೆ ಗುಣಮಟ್ಟದ ತಾಮ್ರವನ್ನು ಬಳಸಲಾಗಿದೆ. ಮೂರ್ತಿಯ ತಲೆ, ಕೈ, ಕಾಲುಗಳು ಹಾಗೂ ಕೈ ಕತ್ತಿಯನ್ನು ಪ್ರತ್ಯೇಕವಾಗಿ ತಂದು ಕೆಟ್ಟರೀತಿಯಲ್ಲಿ ಜೋಡಿಸಲಾಗಿದೆ. ಇಲ್ಲಿ ನಡೆಯುತ್ತಿರುವುದು ಅಕ್ರಮ ಕಾಮಗಾರಿ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮಕ್ಕೆ ಮುಂದಾಗಿರಲಿಲ್ಲ. ಈ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವುದಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಮುತಾಲಿಕ್ ಅರ್ಜಿಯಲ್ಲಿ ಕೋರಿದ್ದರು.