ಕರ್ನಾಟಕದಲ್ಲಿ ವಿದ್ಯುತ್ ಬಿಕ್ಕಟ್ಟು ಎದುರಾಗಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಅಧಿಕಾರಿಗಳ ತಂಡದೊಂದಿಗೆ ದೆಹಲಿಗೆ ದೌಡಾಯಿಸಿದ್ದು, ಕೇಂದ್ರ ಸಚಿವಾಲಯದೊಂದಿಗೆ ಸಭೆ ನಡೆಸಿದ್ದಾರೆ. ಕಲ್ಲಿದ್ದಲು ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೆಚ್ಚುವರಿ ಎರಡು ರೇಕ್ ಕಲ್ಲಿದ್ದಲು ಪೂರೈಕೆ ಮಾಡುವಂತೆ ಕೋರಿದ್ದಾರೆ.
ಸಭೆಯಲ್ಲಿ ಜಾರ್ಜ್ ಅವರು ಕೇಂದ್ರ ಇಂಧನ ಸಚಿವ ಆರ್.ಕೆ ಸಿಂಗ್ ಅವರಿಗೆ ಕೇಂದ್ರೀಯ ಉತ್ಪಾದನಾ ಕೇಂದ್ರಗಳಲ್ಲಿ ಕರ್ನಾಟಕದ ಪಾಲನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಏಕೆಂದರೆ, ಪ್ರತಿದಿನ ವಿದ್ಯುತ್‌ಗೆ ಬೇಡಿಕೆ 5000-7000MWರಷ್ಟು ಹೆಚ್ಚಾಗಿದೆ ಎಂದು ಅವರು ವಿವರಿಸಿದ್ದಾರೆ.
“ದಿನನಿತ್ಯ ಸಿಗುವ ಕಲ್ಲಿದ್ದಲನ್ನು ಬಳಸುತ್ತಿದ್ದೇವೆ. ಬೇಡಿಕೆ ಹೆಚ್ಚಿದಂತೆ ಬಳಕೆ ಹೆಚ್ಚಿದೆ. ಬೇಡಿಕೆಯನ್ನು ಪೂರೈಸಲು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು, ನಾವು ಇನ್ನೂ ಎರಡು ರೇಕ್ ಕಲ್ಲಿದ್ದಲಿಗಾಗಿ ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಕೇಂದ್ರವು ಒಪ್ಪಿದೆ. ಆದರೆ, ದೇಶಾದ್ಯಂತ ವಿದ್ಯುತ್ ಪರಿಸ್ಥಿತಿಯು ಬಿಗಡಾಯಿಸಿರುವ ಕಾರಣ ಆತಂಕವನ್ನು ವ್ಯಕ್ತಪಡಿಸಿದೆ. ನಾಗ್ಪುರ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಕಲ್ಲಿದ್ದಲಿನ ಗುಣಮಟ್ಟವೂ ಕುಸಿಯುತ್ತಿದೆ.” ಎಂದು ಇಲಾಖೆಯ ಮೂಲಗಳು ತಿಳಿಸಿವೆ.
“ರಾಜ್ಯದಲ್ಲಿ ಪ್ರಸ್ತುತ ಸುಮಾರು 1.7-2 ಲಕ್ಷ ಟನ್ ಕಲ್ಲಿದ್ದಲು ಇದೆ. ಇದನ್ನು ಪ್ರತಿದಿನ ಮೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಬಳಸಲಾಗುತ್ತಿದೆ. ಕರ್ನಾಟಕವು ಒಡಿಶಾ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದ ದಿನಕ್ಕೆ 13-14 ರೇಕ್‌ಗಳಷ್ಟು ಕಲ್ಲಿದ್ದಲನ್ನು ಪಡೆಯುತ್ತಿದೆ (ಪ್ರತಿ ರೇಕ್‌ಗೆ ಸುಮಾರು 4,000 ಟನ್). ರಾಜ್ಯವು ಪ್ರತಿದಿನ 2,118MW ಉಷ್ಣ ವಿದ್ಯುತ್ ಉತ್ಪಾದಿಸುತ್ತಿದೆ. ಅಲ್ಲದೆ, ಜಲ ವಿದ್ಯುತ್ ಸೇರಿದಂತೆ 5,919MW ವಿದ್ಯುತ್ ಉತ್ಪಾದಿಸುತ್ತಿದೆ” ಇಲಾಖೆ ಹೇಳಿದೆ.
“ನಾವು ಈ ವರ್ಷ ಯಾವುದೇ ಥರ್ಮಲ್ ಸ್ಟೇಷನ್‌ಗಳನ್ನು ಮುಚ್ಚಿಲ್ಲ. ಈಗ, ಮಾನ್ಸೂನ್ ಮಳೆ ಸರಿಯಾಗಿ ಆಗದ ಕಾರಣ ಉಷ್ಣ ಶಕ್ತಿಯ ಬೇಡಿಕೆ ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲಿ ಸ್ಥಾಪಿತ ಸಾಮರ್ಥ್ಯದಲ್ಲಿ ಯಾವುದೇ ಹೆಚ್ಚಳವಾಗಿಲ್ಲ” ಎಂದು ಇಲಾಖೆ ತಿಳಿಸಿದೆ.