ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲು ಹಾಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸ್ಫೋಟಿಸುವುದಾಗಿ ಬಂಧಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿಗೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿರಣ್ ಮೋಷಿ(48) ಎಂಬಾತ ಡಿಐಜಿಪಿಗೆ ಕರೆ ಮಾಡಿದ್ದ ಆರೋಪಿ. ಈತ ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ನಿವಾಸಿ. ಬಂಧಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿ ಪಿ ಶೇಷ ಅವರಿಗೆ ಆರೋಪಿ ಕಿರಣ್ ಮೋಷಿ 3 ಮೊಬೈಲ್ ನಂಬರ್‌ಗಳಿಂದ ಕರೆ ಮಾಡಿ ಬೆದರಿಕೆ ಒಡಿದ್ದ. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದರು.
ಒಂದೂರಿನಿಂದ ಒಂದೂರಿಗೆ ಸಂಚರಿಸುವ ಆರೋಪಿ ಕಿರಣ್ ಮೋಷಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ. ಸದ್ಯಕ್ಕೆ ಆತ ಬೆಂಗಳೂರಿನಲ್ಲಿದ್ದಾನೆಂಬ ಮಾಹಿತಿ ಸಿಕ್ಕಿದ್ದು, ಬಂಧನಕ್ಕೆ ಪೊಲೀಸರು ತಂಡ ರಚಿಸಿ ಬೆಂಗಳೂರಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ
ಘಟನೆ ಹಿನ್ನೆಲೆ
ಆರೋಪಿ ಕಿರಣ್ ಮೋಷಿ 2022ರಲ್ಲಿ ಮತ್ತೊಬ್ಬರ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ ಆರೋಪದ ಮೇಲೆ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದರು. 10 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿದ್ದು ಹೊರ ಬಂದಿದ್ದ. ಏಕಾಏಕಿ ಜನಪ್ರಿಯ ಆಗಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದ. ಮತ್ತೆ ಈ ರೀತಿ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕಿರಣ್ ಮೋಷಿ ಅಕ್ಟೋಬರ್ 8ರಂದು ಬಂಧಿಖಾನೆ ಉತ್ತರ ವಲಯ ಡಿಐಜಿಪಿಗೆ ಕರೆ ಮಾಡಿ, 3 ಪ್ರತ್ಯೇಕ ಮೊಬೈಲ್ ಸಂಖ್ಯೆಗಳಿಂದ ಬೆಂಗಳೂರಿನ ಕೇಂದ್ರ ಕಾರಾಗೃಹ ಹಾಗೂ ಬೆಳಗಾವಿಯ ಹಿಂಡಲಗಾ ಕಾರಾಗೃಹವನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ. ಅಲ್ಲದೇ, ʼನಾನು ಹಿಂಡಲಗಾ ಕೇಂದ್ರ ಕಾರಾಗೃಹದ ಹಿರಿಯ ವೀಕ್ಷಕ ಜಗದೀಶ್ ಗಸ್ತಿ, ಎಸ್ ಎಂ ಗೋಟೆ ಅವರ ಪರಿಚಿತನೆಂದು ಹೇಳಿಕೊಂಡಿದ್ದು, ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗಲಭೆ ಸೃಷ್ಟಿಸುತ್ತೇನೆ ಮತ್ತು ನಿಮ್ಮ ಮೇಲೆ ಹಲ್ಲೆ ನಡೆಸುತ್ತೇನೆʼ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಹಿಂಡಲಗಾ ಜೈಲಿನಲ್ಲಿದ್ದಾಗ ಭೂಗತ ಪಾತಕಿ ಬನ್ನಂಜೆ ರಾಜಾಗೆ ಸಹಾಯ ಮಾಡಿದ್ದಾಗಿಯೂ ಹೇಳಿಕೊಂಡಿದ್ದ. ಈ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ಡಿಐಜಿಪಿ ಟಿ ಪಿ ಶೇಷ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಆರೋಗ್ಯಾಧಿಕಾರಿ ಕಚೇರಿಯಲ್ಲಿ ಎಣ್ಣೆ ಪಾರ್ಟಿ; ಏಳು ಸಿಬ್ಬಂದಿ ಅಮಾನತು
ಆರೋಪಿ ತನ್ನ ಪತ್ನಿ ಹೆಸರಿನಲ್ಲಿರುವ ಸಿಮ್ ಬಳಸಿ ಕರೆ ಮಾಡಿದ್ದಾನೆ. ಮೂರು ಬೇರೆ ಬೇರೆ ಮೊಬೈಲ್ ಸಂಖ್ಯೆಗಳಿಂದ ಕರೆ ಬಂದಿದ್ದು, ಮೂರನ್ನೂ ಟ್ರ್ಯಾಕ್ ಮಾಡಲಾಗಿದ್ದು, ಒಂದು ಸಂಖ್ಯೆ ಆತನ ಪತ್ನಿ ಹೆಸರಿನಲ್ಲಿರುವುದು ತಿಳಿದುಬಂದಿದೆ. ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.