ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಅಥಿತಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷರು ಹಾಗೂ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಡಾ ಟಿ ದುರುಗಪ್ಪ ಮಾತನಾಡಿ, “ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡ ತಿಂಗಳಿಂದ ವೇತನವನ್ನು ಆಯಾ ತಿಂಗಳ 5ನೇ ತಾರೀಖಿನ ಒಳಗಾಗಿ ನೀಡಬೇಕು” ಎಂದು ಆಗ್ರಹಿಸಿದರು.
“ಆರೋಗ್ಯ ಏರುಪೇರಾಗಿ ಮೃತಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು. ಅತಿಥಿ ಉಪನ್ಯಾಸಕರ ಹೆಸರಿನಲ್ಲಿ ಫ್ರಾವಿಡೆಂಟ್ ಫಂಡ್, ಇಎಸ್‌ಐ ನೀಡುವಂತೆ ಕ್ರಮ ಕೈಗೊಳ್ಳಬೇಕು. ಹಣಕಾಸು ಇಲಾಖೆಯ ವಿಳಂಬ ನೀತಿಯಿಂದಾಗಿ ಸಂಬಳ ನಿರಂತರವಾಗಿ ವಿಳಂಬವಾಗುತ್ತಿದ್ದು, ಇದನ್ನು ಆದಷ್ಟು ಬೇಗನೆ ಸುಧಾರಿಸಬೇಕು ಮತ್ತು ಯುಜಿಸಿ ನಿಯಮಾವಳಿಯಂತೆ ಗೌರವಧನವನ್ನು ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.
“ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ದೆಹಲಿ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಅಲ್ಲಿನ ಸರ್ಕಾರಗಳು ಸೇವಾ ಭದ್ರತೆಯನ್ನು ನೀಡಿ ಖಾಯಂ ಮಾಡಿರುವಂತೆ ಕರ್ನಾಟಕದಲ್ಲೂ ಈ ಕ್ರಮ ಜರುಗಿಸಬೇಕು. ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದಾಗ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಸ್ತುತ ತಮ್ಮದೇ ಸರ್ಕಾರವಿದ್ದು, ನಮ್ಮನ್ನು ಖಾಯಂಗೊಳಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸರ್ಕಾರಿ ಆರೋಗ್ಯ ಕೇಂದ್ರದ ಸುತ್ತಲೂ ಸ್ವಚ್ಛತೆಯ ಕೊರತೆ
“12 ಸಾವಿರಕ್ಕೂ ಹೆಚ್ಚು ಅಥಿತಿ ಉಪನ್ಯಾಸಕರ ಜೀವನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಕಳೆದ ಆಗಸ್ಟ್ ತಿಂಗಳಲ್ಲಿ ಕಾರ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರ ಗೌರವಧನವನ್ನು ಶೀಘ್ರ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಡಾ ಎಚ್ ಹನುಮೇಶ್, ಜಿಲ್ಲಾ ಮುಖಂಡ ಡಾ ಕೆ ಬಸಪ್ಪ, ರುದ್ರಮುನಿ, ಡಿ ಸಿದ್ದೇಶ್, ಜಿಲ್ಲಾ ಕಾರ್ಯದರ್ಶಿ, ರಮೇಶ್ ಎಸ್ ಎಂ, ಗೋವಿಂದಪ್ಪ, ಗುರುರಾಜ್, ಪ್ರಭಾವತಿ, ಶುಭಾಜ್ಯೋತಿ, ಸುಜಾತ, ನವೀನಕುಮಾರಿ, ಸರಿತಾ ಸೇರಿದಂತೆ ಇತರರು ಇದ್ದರು.