ವಿವಿಧ ಸಂಘಟನೆಗಳು ಒಗ್ಗೂಡಿ ನಡೆಸುತ್ತಿರುವ ‘ಮಹಿಷ ದಸರಾ’ ಉತ್ಸವ ವಿಜೃಂಭಣೆಯಿಂದ ಆಚರಣೆಯಾಗುತ್ತಿದೆ. ಪರ-ವಿರೋಧ ಚರ್ಚೆಗಳು, ಬಿಗಿ ಕಟ್ಟುಪಾಡುಗಳ ನಡುವೆಯೂ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.
ಮಹಿಷ ದಸರಾ ಆಚರಣೆಗೆ ಬಿಡುವುದಿಲ್ಲ. ಮಹಿಷ ದಸರಾ ನಡೆದಲ್ಲಿ ಚಾಮುಂಡಿ ಬೆಟ್ಟ ಚಲೋ ನಡೆಸುತ್ತೇವೆ. ಘರ್ಷಣೆ ಮಾಡುತ್ತೇವೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಬೆದರಿಕೆಯೊಡ್ಡಿದ್ದರು. ಪೊಲೀಸರು ಕೂಡ ಮಹಿಷ ದಸರಾಗೆ ಅನುಮತಿಯಿಲ್ಲವೆಂದು ಹೇಳಿದ್ದರು. ಆ ಬಳಿಕ ಸಾರ್ವಜನಿಕ ಒತ್ತಡಕ್ಕೆ ಮಣಿದು ಷರತ್ತುಗಳೊಂದಿಗೆ ಮಹಿಷ ದಸರಾಗೆ ಪೊಲೀಸರು ಸಮ್ಮತಿ ನೀಡಿದ್ದರು.
ಮೈಸೂರಿನ ಪುರಭವನದಲ್ಲಿ ಅದ್ದೂರಿಯಾಗಿ ಮಹಿಷ ದಸರಾ ನಡೆಯುತ್ತಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಬೆಂಗಳೂರು ಜಿಲ್ಲೆಗಳಿಂದ ನೂರಾರು ಜನರು ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಮೈಸೂರಿನ ಅಶೋಕಪುರಂನಿಂದ ನೂರಾರು ಯುವಕರು ನೀಲಿ ಬಾವುಟ ಹಿಡಿದು ಜಾಥಾ ನಡೆಸಿದ್ದಾರೆ.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಖ್ಯಾತ ಗಾಯಕ ಅಮ್ಮಾ ರಾಮಚಂದ್ರ ಮತ್ತು ತಂಡದವರು ಹೋರಾಟದ ಹಾಡುಗಳನ್ನು ಹಾಡಿದರು.