ಈ ದಿನ ಸಂಪಾದಕೀಯ | ಸರ್ಕಾರವೇನೋ ಬದಲಾಯಿತು, ಕೋಮುವಾದಿಗಳ ಅಟಾಟೋಪಗಳಿಗೆ  ಅಂಕುಶ ಯಾವಾಗ?

Date:

Advertisements

ಅಕ್ಟೋಬರ್‌ 15ರಿಂದ  ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದ ಸಂತೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ! ಇದು ನಿಜಕ್ಕೂ ಕೋಮುವಾದಿ ಶಕ್ತಿಗಳ ವಿರುದ್ಧ ಮತದಾನ ಮಾಡಿದ ಎಲ್ಲರಿಗೂ ಆಘಾತ ನೀಡುವ ಖಂಡನೀಯ ವಿದ್ಯಮಾನ.

ನಾಲ್ಕು ವರ್ಷಗಳಿಂದ ಕೋಮುವಾದಿಗಳದ್ದೇ ಸರ್ಕಾರ ರಾಜ್ಯದಲ್ಲಿ ಆರ್ಭಟಿಸುತ್ತಿದ್ದಾಗ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಪ್ರಗತಿಪರರ ತುಚ್ಛೀಕರಣ ಮಾಮೂಲಿಯಾಗಿತ್ತು. “ಅವರದ್ದೇ ಸರ್ಕಾರ ! ಅವರು ಮಾಡಿದ್ದೇ ಶಾಸನ” ಎಂಬ ಅಸಹಾಯಕ ಮನಸ್ಥಿತಿಗೆ ಜನರು ಬಂದಿದ್ದರು. ಕೋಮುವಾದ, ದ್ವೇಷ ರಾಜಕಾರಣ,  ಪ್ರಚೋದನಕಾರಿ ಪಂಥಾಹ್ವಾನಗಳಿಂದ ರೋಸಿ ಹೋಗಿದ್ದ ಮತದಾರರು ವಿಧಾನಸಭಾ ಚುನಾವಣೆಯಲ್ಲಿ
ತಕ್ಕ ಉತ್ತರ ಕೊಟ್ಟು ಐದು ತಿಂಗಳುಗಳೇ ಉರುಳಿವೆ. ಕೋಮುವಾದಿಗಳನ್ನು ನಿವಾಳಿಸಿ ಸೋಲಿನ ತಿಪ್ಪೆಗೆಸೆದ ಫಲಿತಾಂಶದಿಂದಾಗಿ ಅಲ್ಪಸಂಖ್ಯಾತರು ಮಾತ್ರವಲ್ಲದೆ, ಸಮಾಜದಲ್ಲಿ ಶಾಂತಿ ಸಹಬಾಳ್ವೆ ಬಯಸುವ ಎಲ್ಲರೂ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಯಾವುದೇ ರಾಜಕೀಯ ಲಾಭ, ಫಲಾಪೇಕ್ಷೆ ಇಲ್ಲದೆ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕುವ ಏಕೈಕ ಕಾರಣದಿಂದ ತಿಂಗಳುಗಟ್ಟಲೆ ದುಡಿದ ದೊಡ್ಡದೊಂದು ಸಮೂಹವೇ ನಮ್ಮ ನಡುವೆ ಇದೆ. ಅದರ ಫಲವಾಗಿ ಕಾಂಗ್ರೆಸ್‌ ಈಗ ಅಧಿಕಾರ ಅನುಭವಿಸುತ್ತಿದೆ.

ಕಾಂಗ್ರೆಸ್‌ ಅಧಿಕಾರ ಹಿಡಿದರೆ ಮುಖ್ಯವಾಗಿ ಕರಾವಳಿಯ ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳ ಆಟಾಟೋಪಕ್ಕೆ ತಕ್ಕ ಮಟ್ಟಿನ ಕಡಿವಾಣ ಬೀಳಲಿದೆ ಎಂಬ ನಿರೀಕ್ಷೆ ಬಹುತೇಕರಿಗೆ ಇತ್ತು. ಆದರೆ, ಡಾ ಜಿ ಪರಮೇಶ್ವರ ಅವರು ಗೃಹಸಚಿವರಾಗುತ್ತಿದ್ದಂತೆ ಇಂತಹ ನಿರೀಕ್ಷೆ, ಭರವಸೆಗಳ ಮೇಲೆ ತಣ್ಣೀರು ಎರಚಿದಂತಾಗಿತ್ತು. ಕೋಮುವಾದಿ ಅಟ್ಟಹಾಸವನ್ನು ಅಡಗಿಸುವ ನಿರೀಕ್ಷೆ ಐದೇ ತಿಂಗಳಲ್ಲಿ ಕ್ಷೀಣಿಸಿದೆ. ರಾಜ್ಯ ಗೃಹ ಇಲಾಖೆಯ, ಅದರಲ್ಲೂ ವಿಶೇಷವಾಗಿ ಕರಾವಳಿ ಪೊಲೀಸರ ಕಾರ್ಯ ವೈಖರಿ ಬಲವಾದ ಗುಮಾನಿ ಹುಟ್ಟಿಸಿದೆ.

Advertisements

ಕಳೆದ ಎರಡು ವರ್ಷಗಳಲ್ಲಿ ಕರಾವಳಿಯ ಜನರನ್ನು ಹೈರಾಣಾಗಿಸಿದ ಬಿಜೆಪಿ ಮತ್ತು ಸಂಘಪರಿವಾರದ ಮುಸ್ಲಿಂ ದ್ವೇಷಿ ಅಜೆಂಡಾದ ನಾನಾ ಅವತಾರಗಳನ್ನು ನೋಡಿದ್ದೇವೆ. ಅದರಲ್ಲಿ ಹಿಂದೂ ಧಾರ್ಮಿಕ ಸ್ಥಳಗಳು, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡದಂತೆ ನಿಷೇಧ ಹೇರಿದ ಹಿಂದುತ್ವವಾದಿ ಸಂಘಟನೆಗಳ ಕೃತ್ಯ ಅಮಾನವೀಯ. ʼಸರ್ವೇ ಜನಾಃ ಸುಖಿನೋ ಭವಂತುʼ ಎಂಬ ಹಿಂದೂ ಧರ್ಮದ ಆಶಯದ ಅಣಕ.

ಈ ದುರುಳ ಕೃತ್ಯಗಳೆಲ್ಲ ನಡೆದದ್ದು ಕೋಮುವಾದವನ್ನೇ ತನ್ನ ಮತಗಳಿಕೆಯ ಮುಖ್ಯ ಬಂಡವಾಳ ಮಾಡಿಕೊಂಡ ಬಿಜೆಪಿ ಸರ್ಕಾರ ಇದ್ದಾಗ. ಆದರೆ ಸೆಕ್ಯುಲರ್‌ ಎಂದು ಹೇಳಿಕೊಳ್ಳುವ ಮತ್ತು ಈ ಬಾರಿ ಶೇ 80% ರಷ್ಟು ಮುಸ್ಲಿಮರು ಬೆಂಬಲಿಸಿದ ಕಾಂಗ್ರೆಸ್‌ ಸರ್ಕಾರದ ಕಾಲದಲ್ಲೂ ಅವೇ ಹಳೆಯ ದ್ವೇಷ ಕಾರುವ, ಕೋಮುವಾದ ಕೆರಳಿಸುವ ಸಾಮರಸ್ಯ ವಿರೋಧಿ ಚಟುವಟಿಕೆಗಳು ಸ್ವಚ್ಛಂದವಾಗಿ ಮುಂದುವರೆದಿವೆ. ಕಾಂಗ್ರೆಸ್‌ನ ಈ ನಿರ್ಲಕ್ಷ್ಯ, ಲಜ್ಜೆಗೇಡಿತನ ತೀವ್ರ ದಿಗ್ಭ್ರಾಂತಿ ಹುಟ್ಟಿಸತೊಡಗಿವೆ. ಈಗಲೂ ಕರಾವಳಿಯ ಜಿಲ್ಲಾಡಳಿತ ಕಟ್ಟರ್ ಸನಾತನಿಗಳ ಮಾತಿಗೆ ಗೋಣು ಆಡಿಸುತ್ತಿರುವ ಸೂಚನೆಗಳು ಗೋಚರಿಸಿವೆ.

ಇಂದಿನ ಸುದ್ದಿಯ ಪ್ರಕಾರ ಅಕ್ಟೋಬರ್‌ 15ರಿಂದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದ ಸಂತೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ! ಇದು ನಿಜಕ್ಕೂ ಕೋಮುವಾದಿ ಶಕ್ತಿಗಳ ವಿರುದ್ಧ ಮತದಾನ ಮಾಡಿದ ಎಲ್ಲರಿಗೂ ಆಘಾತ ನೀಡುವ ಖಂಡನೀಯ ವಿದ್ಯಮಾನ.

ಕಳೆದ ವರ್ಷ ಕರಾವಳಿಯ ಹಲವು ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹೇರಿದ್ದ ನಿಷೇಧ ಉತ್ತರ ಕರ್ನಾಟಕದಲ್ಲೂ ಪ್ರತಿಧ್ವನಿಸಿತ್ತು. ʼಇನ್ನು ಮುಂದೆ ಸಂಘಿಗಳ ಆಟ ನಡೆಯದುʼ ಎಂದು ಭಾವಿಸಬೇಕಿರುವ ಹೊತ್ತಿನಲ್ಲಿ ಮಂಗಳೂರಿನ ನಾಡ ದೇವತೆ ಮಂಗಳಾ ದೇವಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮಳಿಗೆ ತೆರೆಯಲು ಮುಸ್ಲಿಂ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದರೂ, ಅವರನ್ನು ದೇವಸ್ಥಾನ ಆಡಳಿತ ಮಂಡಳಿ ನಿರ್ಲಕ್ಷಿಸಿದೆ. “ಸನಾತನ ಸಂಸ್ಥೆಯ ಮುಖಂಡರೊಬ್ಬರು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ, ಸಮಸ್ಯೆ ಮಾಡಿಕೊಳ್ಳುವುದು ಬೇಡವೆಂದು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಲಿಲ್ಲ” ಎಂಬುದು ದೇವಾಲಯ ಆಡಳಿತ ಮಂಡಳಿ ನೀಡಿದ ಸಮಜಾಯಿಷಿ.

“ಕರಾವಳಿಯ ಪೊಲೀಸರ ಪೈಕಿ ಬಹುತೇಕರು ನಮ್ಮವರೇ ಇದ್ದಾರೆ” ಎಂಬ ಬಿಜೆಪಿ ಮುಖಂಡರೊಬ್ಬರು ಕೆಲ ವರ್ಷಗಳ ಹಿಂದೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ನಮ್ಮವರೇ ಎಂದರೆ ಆರೆಸ್ಸೆಸ್‌, ಕೋಮುವಾದಿ ಮನಸ್ಥಿತಿಯವರು ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಈಗ ಸರ್ಕಾರ ಬದಲಾಗಿದೆ. ಆದರೆ, ಅದೇ  ಅಧಿಕಾರಿಗಳು ಇದ್ದಾರೆ. ಅವರ  ಮನಸ್ಥಿತಿ ಬದಲಾಗದು. ʼಈಗಲೂ ಕರಾವಳಿಯ ಪೊಲೀಸರು ಧರ್ಮ ನೋಡಿ ಐಪಿಸಿ ಸೆಕ್ಷನ್‌ ಗಳನ್ನು ಹಾಕುತ್ತಿದ್ದಾರೆ. ಒಂದೇ ಸ್ವರೂಪದ ಅಪರಾಧ ಮಾಡಿದವರಲ್ಲೂ ಧರ್ಮ ನೋಡಿ ಕ್ರಮ ಜರುಗಿಸುತ್ತಾರೆʼ ಎಂಬ ಆರೋಪಗಳು ಕೇಳಿ ಬಂದಿವೆ.

ಮೈಸೂರಲ್ಲಿ ನಡೆಯಬೇಕಿದ್ದ (ಅ.13) ಮಹಿಷ ದಸರಾ ವಿರೋಧಿಸಿ ಸಂಸದ ಪ್ರತಾಪ್‌ ಸಿಂಹ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಗೆ ಜಿಲ್ಲಾಡಳಿತ ಭಯಪಟ್ಟು ಎರಡೂ ಕಡೆಯವರಿಗೆ ಅವಕಾಶ ನಿರಾಕರಿಸಿತ್ತು. ನಂತರ ಜನಾಕ್ರೋಶಕ್ಕೆ ಮಣಿದು ಸಭಾಂಗಣವೊಂದರಲ್ಲಿ ನೂರೆಂಟು ಕಟ್ಟುಪಾಡುಗಳ ನಡುವೆ ಮಹಿಷ ದಸರಾ ಆಚರಿಸಲು ಜಿಲ್ಲಾಡಳಿತ ಅವಕಾಶ ನೀಡಿದೆ. ಮೈಸೂರು ನಗರದಲ್ಲಿ 144 ಸೆಕ್ಷನ್‌ ಹಾಕಿ, ಇಡೀ ದಿನ ಚಾಮುಂಡಿ ಬೆಟ್ಟ ಪ್ರವೇಶ ನಿರ್ಬಂಧಿಸಿದೆ. ಕಾನೂನು ಸುರಕ್ಷತೆಯ ದೃಷ್ಟಿಯಿಂದ ಇದು ಸರಿಯಾದ ನಡೆ ಇರಬಹುದು. ಆದರೆ, ಸಮಾಜದ್ರೋಹಿ ಶಕ್ತಿಗಳಿಗೆ ಸ್ಪಷ್ಟ ಸಂದೇಶ ನೀಡುವುದರಲ್ಲಿ ಸರ್ಕಾರ ನಿಚ್ಚಳ ಇಚ್ಛಾಶಕ್ತಿ ತೋರಿಸುತ್ತಿಲ್ಲ.

ಇದನ್ನೂ ಓದಿ ದಕ್ಷಿಣ ಕನ್ನಡ  | ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ; ಸಭೆ ಕರೆದ ಜಿಲ್ಲಾಧಿಕಾರಿ

ಜಾತ್ರೆಗಳಲ್ಲಿ ಅನ್ಯ ಕೋಮಿನ ವ್ಯಾಪಾರಿಗಳನ್ನು ಬಹಿಷ್ಕರಿಸಿ ಫ್ಲೆಕ್ಸ್‌ ಹಾಕುವುದು, ಮುಸ್ಲಿಂ ವ್ಯಾಪಾರಿಗಳಿಗೆ ಬೆದರಿಕೆಯೊಡ್ಡುವುದು, ಅವರೊಂದಿಗೆ ವ್ಯಾಪಾರ ಮಾಡದಂತೆ ಕರಪತ್ರ ಹಂಚುವುದು ಮುಂತಾದ ಯಾವುದೇ ಕೃತ್ಯ ನಡೆಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಕನಿಷ್ಠ ಧೈರ್ಯವನ್ನು ಸರ್ಕಾರ ತೋರಿಸಬೇಕಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಪ್ರಕರಣವೇ ಕೊನೆಯ ಪ್ರಕರಣವಾಗಲಿ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟ ಸಂದೇಶ ಕೊಡುವ ಕೆಲಸವನ್ನು ತುರ್ತಾಗಿ ಮಾಡಲಿ. ಮುಖ್ಯಮಂತ್ರಿ ಈ ಕುರಿತು ತಕ್ಷಣ ಕಾರ್ಯಪ್ರವೃತ್ತರಾಗಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X