ಕೇಳಿದ್ದ ದಾಖಲೆ ನೀಡಲು ವಿಳಂಬ ಮಾಡಿದ್ದಕ್ಕೆ ಕೋಪಗೊಂಡ ಗ್ರಾಮಸ್ಥನೊಬ್ಬ ಗ್ರಾಮ ಪಂಚಾಯತಿ ಪಿಡಿಒ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕುದರಿಮೋತಿ ಗ್ರಾಮ ಪಂಚಾಯತಿ ಪಿಡಿಒ ಹನುಮಂತಪ್ಪ ನಾಯಕ್ ಮೇಲೆ ಹಲ್ಲೆ ನಡೆದಿದೆ. ಅದೇ ಗ್ರಾಮ ಮರಿಸ್ವಾಮಿ ಎಂಬಾತ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮರಿಸ್ವಾಮಿ ಅವರು ತಮ್ಮ ನಿವೇಶನದ ದಾಖಲೆ ನೀಡುವಂತೆ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ದಾಖಲೆ ನೀಡಲು ಪಿಡಿಒ ಹನುಮಂತಪ್ಪ ವಿಳಂಬ ಮಾಡಿದ್ದಾರೆ ಎನ್ನಲಾಗಿದೆ.
ವಿಳಂಬ ಮಾಡಿದ್ದನ್ನು ಪ್ರಶ್ನಿಸಿ ಪಿಡಿಒ ಜೊತೆ ಮರಿಸ್ವಾಮಿ ಜಗಳ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಪಿಡಿಒ ಹನುಮಂತಪ್ಪ ಮೇಲೆ ಮರಿಸ್ವಾಮಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಮರಿಸ್ವಾಮಿ ವಿರುದ್ಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.