ಅನುಮತಿ ಇಲ್ಲದೆ ಪಟಾಕಿ ಅಂಗಡಿ ನಡೆಸುವಂತಿಲ್ಲ. ಜಿಲ್ಲೆಯಲ್ಲಿ ಅಂತಹ ಅಂಗಡಿಗಳು ಕಂಡು ಬಂದರೆ ಅಂಗಡಿ ಮಾಲಿಕರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಟಾಕಿ ಅಂಗಡಿ ಅನುಮತಿಗೆ ಸಂಬಂಧಿಸಿದ ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು. “ಮುಂಬರುವ ದೀಪಾವಳಿ ಹಬ್ಬದ ಅಂಗವಾಗಿ ಹಾಕಲಾಗುವ ತಾತ್ಕಾಲಿಕ ಪಟಾಕಿ ಮಳಿಗೆಗಳ ಮಾಲಿಕರು ಮುಂಚಿತವಾಗಿ ಸಂಬಂಧಪಟ್ಟವರಿಂದ ಪರವಾನಗಿ ಪಡೆಯಬೇಕು. ಶಾಶ್ವತವಾಗಿ ಪಟಾಕಿ ಅಂಗಡಿಗಳನ್ನು ನಡೆಸುವವರು ಕಡ್ಡಾಯವಾಗಿ ಪರವಾನಗಿ ಪಡೆದಿರಬೇಕು. ಯಾರ ಪರವಾನಗಿ ಅವಧಿ ಮುಗಿದಿದೆಯೋ ಅವರು ಕೂಡಲೇ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು” ಎಂದರು.
“ತಾತ್ಕಾಲಿಕ ಅನುಮತಿಗಾಗಿ ಅರ್ಜಿ ಸಲ್ಲಿಸಿದ ಅಂಗಡಿಗಳ ಸ್ಥಳಕ್ಕೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅಗ್ನಿ ಶಾಮಕ ದಳ ಹಾಗೂ ನಗರಸಭೆಯ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿ ಮೂರು ದಿನಗಳ ಒಳಗೆ ಎನ್‌ಓಸಿ ನೀಡಬೇಕು. ಈ ಹಿಂದಿನಿಂದ ಬೀದರ ಜಿಲ್ಲೆಯಾದ್ಯಂತ ನಡೆಸಲಾಗುತ್ತಿರುವ ಪಟಾಕಿ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಅವರ ಪರವಾನಗಿ ಪರಿಶೀಲಿಸಬೇಕು ಹಾಗೂ ಅವರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ದೃಢಿಕರಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅನುಮತಿ ಇಲ್ಲದೆ ಪಟಾಕಿ ಮಾರಾಟ ಅಪರಾಧ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, “ಯಾರು ಕೂಡ ಪರವಾನಗಿ ಇಲ್ಲದೆ ಪಟಾಕಿ ಮಾರಾಟ ಮಾಡಬಾರದು, ಪಟಾಕಿ ಅಂಗಡಿ ಹೊರತು ಪಡಿಸಿ ಇತರೆ ಅಂಗಡಿಗಳಲ್ಲಿ ಪಟಾಕಿ ಮಾರಾಟ ಮಾಡುವುದು ಅಪರಾಧವಾಗಿರುತ್ತದೆ. ಆದ್ದರಿಂದ ಯಾರೂ ಅನುಮತಿ ಇಲ್ಲದ ಕಡೆಗಳಲ್ಲಿ ಪಟಾಕಿ ಮಾರಾಟ ಮಾಡಬಾರದು” ಎಂದು ಎಚ್ಚರಿಸಿದರು.
“ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಪಟಾಕಿ ಮಾರಾಟದ ಪರವಾನಗಿ ಇಲ್ಲದೆ ಇರುವುದು ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು. ಯಾವುದೇ ಕಾರಣಕ್ಕೂ ಸ್ಥಳ ಪರಿಶೀಲನೆ ನಡೆಸದೆ ಎನ್‌ಓಸಿ ನೀಡಬಾರದು. ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಾರದೊಳಗೆ ಮನರೇಗಾ ಕೂಲಿ ಹಣ ಪಾವತಿಸಲು ಬಿಎಸ್‌ಪಿ ಆಗ್ರಹ
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಬೀದರ ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ನಗರಸಭೆ ಆಯುಕ್ತ ಶಿವರಾಜ ರಾಠೋಡ, ಅಗ್ನಿ ಶಾಮಕ ಅಧಿಕಾರಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.