ಕಲಬುರಗಿ | ಒಂದೇ ಕುಟುಂಬದ ಇಬ್ಬರಿಗೆ ಕಿಡ್ನಿ ಸಮಸ್ಯೆ; ಹಿರಿ ಮಗನನ್ನು ಕಳೆದುಕೊಂಡಿರುವ ಕುಟುಂಬ

Date:

Advertisements

ಈ ಕುಟುಂಬವನ್ನು ಕಿಡ್ನಿ ವೈಫಲ್ಯವೆಂಬ ಸಮಸ್ಯೆ ಕಾಡುತ್ತಿದೆ. ಈಗಾಗಲೇ ಕುಟುಂಬದ ಹಿರಿಯ ಮಗ ಕಿಡ್ನಿ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ. ಕಿರಿಯ ಮಗನೂ ಕಡ್ನಿ ವೈಫಲ್ಯಕ್ಕೆ ತುತ್ತಾಗಿದ್ದಾರೆ. ಹೊಲ-ಮನೆ ಕಳೆದುಕೊಂಡು ಕೂಲಿ ಮಾಡಿ ಜೀವನ ದೂಡುತ್ತಿರುವ ಕುಟುಂಬ ಕಿರಿಯ ಮಗನನ್ನಾದರೂ ಉಳಿಸಿಕೊಳ್ಳಬೇಕೆಂದು ಹರಸಾಹಸ ಪಡುತ್ತಿದೆ – ಇದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಶಾಂತಪ್ಪ ಕುಟುಂಬದ ಸಮಸ್ಯೆ.

ನೆಲೋಗಿ ಮೂಲತಃ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ ಅವರ ಹುಟ್ಟೂರು. ಅದೇ ಗ್ರಾಮದ ಶಾಂತಪ್ಪ ಅವರ ಇಬ್ಬರು ಮಕ್ಕಳು ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದಾರೆ. ಅವರಲ್ಲೊಬ್ಬರು ಸಮಸ್ಯೆಗೆ ಚಿಕಿತ್ಸೆ ಪಡೆಯಲಾಗದೆ ಅಸುನೀಗಿದ್ದಾರೆ. ಶಾಂತಪ್ಪ-ಅನಸೂಬಾಯಿ ದಂಪತಿಗಳಿಗೆ ಮೂವರು ಮಕ್ಕಳು – ಭೂತಲ್, ಬಲಭೀಮ್ ಮತ್ತು ಮಗಳು ಭಾಗ್ಯಶ್ರೀ. ಮೂವರಿಗೂ ವಿವಾಹವಾಗಿದೆ. ಎರಡೂ ಕಿಡ್ನಿ ವೈಫಲ್ಯದಿಂದ ಹಿರಿಯ ಮಗ ಭೂತಲ್ ಸಾವನ್ನಪ್ಪಿದ್ದಾರೆ. ಕಿಡಿಯ ಮಗ ಬಲಭೀಮ್ ಅವರೂ ಕಳೆದ ಆರು ವರ್ಷಗಳಿಂದ ಕಿಡ್ನಿ ಸಮಸ್ಯೆ ಎದುರಿಸುತ್ತಿದ್ದಾರೆ.

ಇಬ್ಬರಿಗೂ ಚಿಕಿತ್ಸೆ ಕೊಡಿಸುವುದಕ್ಕಾಗಿ ಶಾಂತಪ್ಪ-ಅನಸೂಯಮ್ಮ ದಂಪತಿಗಳಿಗೆ ತಮ್ಮಲ್ಲಿದ್ದ ಹೊಲ, ಮನೆ ಸೇರಿದಂತೆ ಎಲ್ಲ ಆಸ್ತಿಯನ್ನೂ ಮಾರಾಟ ಮಾಡಿದ್ದಾರೆ. ಆದರೂ, ಹಿರಿಯ ಮಗಳನ್ನು ಉಳಿಸಿಕೊಳ್ಳಲು ಆ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಹಿರಿಯ ಮಗನ ಮೂವರು ಮಕ್ಕಳು ತಂದೆ ಕಳೆದುಕೊಂಡು ಅನಾಥವಾಗಿವೆ. ಕಿರಿಯ ಮನಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಷ್ಟ ಪಡುತ್ತಿದೆ ಕುಟುಂಬ. ಆದರೆ, ಹೊಲ-ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿದ್ದುಕೊಂಡು, ಕೂಲಿ ಕೆಲಸ ಮಾಡುತ್ತಾ ಜೀವನ ದೂಡುತ್ತಿದೆ.

Advertisements

ತಮ್ಮ ಸಮಸ್ಯೆಯ ಬಗ್ಗೆ ಈದಿನ.ಕಾಮ್‌ ಜೊತೆ ಮಾತನಾಡಿದ ಬಲಭೀಮ್, “ನನಗೆ ‘ಹೈ ಬಿಪಿ’ ಆಗಿ ಎರಡು ಕಿಡ್ನಿಗಳೂ ವೈಫಲ್ಯವಾಗಿವೆ. ನನ್ನ ಅಣ್ಣನಿಗೂ ಕೂಡ ಎರಡು ಕಿಡ್ನಿಗಳು ವೈಫಲ್ಯವಾಗಿದ್ದವು. ಅತ ಸಾವನ್ನಪ್ಪಿದ. ವಯಸ್ಸಾದ ತಂದೆ, ತಾಯಿ, ಅತ್ತಿಗೆ, ಅಣ್ಣನ ಮೂವರು ಮಕ್ಕಳು, ನನ್ನ ಪತ್ನಿ, ಮೂವರು ಮಕ್ಕಳು – ದೊಡ್ಡ ಜವಬ್ದಾರಿಯಿದೆ. ಆದರೆ, ನನ್ನ ಅನಾರೋಗ್ಯದಿಂದ ಕುಟುಂಬಸ್ಥರು ದುಡಿದು ನನ್ನನ್ನೂ, ಮಕ್ಕಳನ್ನೂ ಸಾಕುತ್ತಿದ್ದಾರೆ. ದುಡಿದು ಹೊಟ್ಟೆ ತುಂಬಿಸೋದೆ ಕಷ್ಟವಾಗಿದೆ. ಔಷಧಿ ಖರೀದಿಗೆ ಹಣ ಸಾಕಾಗುತ್ತಿಲ್ಲ. ವಾರಕೊಮ್ಮೆ ಡೈಯಾಲಿಸಸ್ ಮಾಡಿಸಿಕೊಳ್ಳಬೇಕು. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಸಿಕೊಳ್ಳುತ್ತಿದ್ದೆ. ಆದರೆ, ಸುಮಾರು ತಿಂಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಡೈಯಾಲಿಸಸ್ ಯಂತ್ರ ಹಾಳಾಗಿದೆ. ಈಗ ಖಾಸಗಿ ಆಸ್ಪತ್ರೆಯಲ್ಲಿ ಮೂರು ಸಾವಿರ ಪಾವತಿಸಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಕಿತ್ತು ತಿನ್ನೋ ಬಡತನದಲ್ಲಿ ಎಲ್ಲವೂ ಕಷ್ಟವಾಗಿದೆ. ನಾನು ಕೂಡ ನನ್ನ ಅಣ್ಣ ಹಾಗೆ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ಕಾಡುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

WhatsApp Image 2023 10 12 at 6.09.34 PM

ಬಲಭೀಮ ಅವರ ತಂದೆ ಶಾಂತಪ್ಪ ಮಾತನಾಡಿ, “ನಾವು ಒಬ್ಬ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದೀವಿ. ಇರೋ ಒಬ್ಬ ಮಗನು ಕೈತಪ್ಪಿ ಹೋದರೆ ಏನು ಮಾಡೋದು. ಸಾಲ ಮಾಡಿಯಾದರು ನಮ್ಮ ಮಗನನ್ನು ಬದುಕಿಸಿಕೊಳ್ಳಬೇಕು ಎಂದರೆ ಊರಲ್ಲಿ ನಮ್ಮ ಪರಿಸ್ಥಿತಿ ನೋಡಿ ಯಾರು ಸಾಲ ಕೊಡುತ್ತಿಲ್ಲ. ಕಿಡ್ನಿ ಕಸಿ ಮಾಡಲು 10 ಲಕ್ಷ ರೂ. ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಅಷ್ಟೊಂದು ಹಣ ನಮ್ಮ ಹತ್ತಿರ ಇಲ್ಲ. ಸರ್ಕಾರ ನಮ್ಮ ನೆರವಿಗೆ ಬರಬೇಕು. ನಮಗೆ ಸಹಾಯ ಮಾಡಬೇಕು. ನಮ್ಮ ಮಗನನ್ನು ಬದುಕಿಸಿಕೊಳ್ಳಲು ಸಹಾಯ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯ ಬೈಲಪ್ಪಮಾತನಾಡಿ, “ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಲಭೀಮ್ ಅವರ ಸಹೋದರ ಭೂತಲ್ ಅವರನ್ನು ನಾವು ಚಿಕಿತ್ಸೆಗಾಗಿ ಸೊಲ್ಲಾಪುರಕ್ಕೂ ಕರೆದುಕೊಂಡು ಹೋಗಿದ್ದೆವು. ಆದರೆ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಬಲಭೀಮ್ ಅವರನ್ನಾದರೂ ಉಳ್ಳಿಸಿಕೊಳ್ಳಬೇಕು. ಇಡೀ ಗ್ರಾಮದಪರವಾಗಿ, ಕುಟುಂಬಸ್ಥ ಪರವಾಗಿ ನಾವು ಶಾಸಕ ಅಜಯ್ ಸಿಂಗ್ ಅವರನ್ನು ಕೇಳಿಕೊಳ್ಳುತ್ತಿದ್ದೇವೆ. ಈತನಿಗೆ ಶಾಸಕರು ಸಹಾಯ ಮಾಡಬೇಕು” ಎಂದು ವಿನಂತಿಸಿಕೊಂಡರು.

ಬಲಭೀಮ್ ಅವರ ಬಾಲ್ಯದ ಸ್ನೇಹಿತ ಬಸವರಾಜ್ ಮಾತನಾಡಿ, “ಸ್ನೇಹಿತರು ಸೇರಿಕೊಂಡು ಬಲಭೀಮನ ಚಿಕಿತ್ಸೆಗಾಗಿ ಕಾಣಿಗೆ ಪೆಟ್ಟಿಗೆ ಹಿಡಿದುಕೊಂಡು ಗ್ರಾಮದ ಎಲ್ಲ ಜನರ ಹತ್ತಿರ ಕೈಲಾದ ಸಹಾಯ ಮಾಡಿ ಎಂದು ಹಣ ಸಂಗ್ರಹಣೆ ಮಾಡಲು ಮುಂದಾಗಿದ್ದೇವೆ” ಎಂದು ಹೇಳಿದರು.

ಅಶೋಕ್ ನಟೇಕಾರ್ ಮಾತನಾಡಿ, “ನಾವು ಸಂಗ್ರಹಣೆ ಮಾಡಿಕೊಟ್ಟ ಹಣದಿಂದ ನಮ್ಮ ಗೆಳೆಯನಿಗೆ ಸಹಾಯ ಆಗುತ್ತದೆಯೇ ಹೊರತು, ಪೂರ್ತಿ ಚಿಕಿತ್ಸೆ ದೊರೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಮ್ಮ ಗ್ರಾಮದ ಇಬ್ಬರು ವ್ಯಕ್ತಿಗಳು ಶಾಸಕರು ಆಗಿದ್ದಾರೆ. ಶಾಸಕ ಡಾ. ಅಜಯ್ ಸಿಂಗ್ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ್ ನಮ್ಮದೇ ಗ್ರಾಮದವರು. ಅವರು ಮನಸು ಮಾಡಿದರೆ ಬಲಭೀಮ್‌ಗೆ ಚಿಕಿತ್ಸೆ ಕೊಡಿಸಬಹುದು. ಅವರು ದಯವಿಟ್ಟು ಸಹಾಯ ಮಾಡಬೇಕು” ಎಂದು ಬೇಡಿಕೊಂಡರು.

ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರನ್ನು ಈದಿನ.ಕಾಮ್ ಭೇಟಿ ಮಾಡಿದ್ದು, “ಬಸವೇಶ್ವರ ಆಸ್ಪತ್ರೆಯಲ್ಲಿ ಬಲಭೀಮ್‌ ಅವರಿಗೆ ಡೈಯಲಿಸಸ್ ಮಾಡುವಂತೆ ತಿಳಿಸುತ್ತೇನೆ. ಆತನಿಗೆ ನನ್ನ ಕಡೆಯಿಂದ ಯಾವ ರೀತಿ ಸಹಾಯ ಮಾಡಲು ಸಾಧ್ಯವೋ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯ್ ಸಿಂಗ್ ಈದಿನ.ಕಾಮ್ ಜೊತೆ ಮಾತನಾಡಿ, “ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲ ಜಿಲ್ಲೆಗಳಲ್ಲಿ ಡಯಾಲಿಸಿಸ್ ಸಮಸ್ಯೆ ಇದೆ. ಇನ್ನು ಎರಡು ದಿನಗಳಲ್ಲಿ ಆ ಸಮಸ್ಯೆ ಬಗೆಹರಿಯುತ್ತದೆ. ನಮ್ಮ ಕ್ಷೇತ್ರದಲ್ಲಿ ಸುಮಾರು ಇಪ್ಪತ್ತಾರು ಜನ ಡಯಾಲಿಸಸ್ ರೋಗಿಗಳಿದ್ದಾರೆ. ಅವರಿಗೆ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಎಂದು ನಾನು ಮೊನ್ನೆಯಷ್ಟೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲರಿಗೂ ನೆರವು ನೀಡಲು ಯೋಜನೆ ರೂಪಿಸುತ್ತೇವೆ” ಎಂದು ಹೇಳಿದರು.

“ಕೆಲವೊಂದು ಲಾ ಸೆಕ್ರೇಟರಿ, ಪ್ರಿನ್ಸಿಪಲ್ ಸೆಕ್ರೇಟರಿ ಇಂವೊಲ್ಮೆಂಟ್ ಇರುತ್ತದೆ. ಕುಟುಂಬಸ್ಥರು ಯಾರಾದ್ರೂ ಕಿಡ್ನಿ ಡೋನೆಟ್ ಮಾಡುವವರು ಇದ್ದರೆ ಅದನ್ನು ಮಾಡಿಸಬಹುದು. ಇಲ್ಲವಾದಲ್ಲಿ, ಸ್ಕೀಮ್ ಪ್ರಕಾರ ಮಾಡಬೇಕ್ಕಾಗುತ್ತದೆ. ಮುಖ್ಯಮಂತ್ರಿ ಪರಿಹಾರ ನಿಧಿ ಅಥವಾ ಧರ್ಮಸಿಂಗ್ ಫೌಂಡೇಷನ್‌ ನಿಧಿಯಿಂದ ಸಹಾಯ ಮಾಡಲು ಸಾಧ್ಯವಾದರೆ ಮಾಡುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X