ಸತತ 42 ಗಂಟೆಗಳ ಪರಿಶೀಲನೆಯ ನಂತರ ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ ಅಂತ್ಯವಾಗಿದೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಮೆಟ್ರೋ ಕಾರ್ಪ್ ಕಂಪನಿ ಪಾಲುದಾರರಾಗಿರುವ ಅಂಬಿಕಾಪತಿ ಪುತ್ರ ಪ್ರದೀಪ್ ಮತ್ತು ಪ್ರಮೋದ್ಗೆ ಐಟಿಯಿಂದ ನೋಟಿಸ್ ನೀಡಲಾಗಿದೆ.
ನಗರದ ಮಾನ್ಯತಾ ಟೆಕ್ಪಾರ್ಕ್ನಲ್ಲಿರುವ ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರ ನಿವಾಸದಲ್ಲಿ ಕಳೆದ 42 ಗಂಟೆಗಳಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹಲವು ಮಹತ್ವದ ದಾಖಲೆಗಳೊಂದಿಗೆ ಪಂಚನಾಮೆ ಕಾರ್ಯ ಪೂರ್ಣಗೊಳಿಸಿದ್ದಾರೆ.
ಗುರುವಾರ ಕಂತೆ ಕಂತೆ ಹಣ ಪತ್ತೆಯಾದ ಬೆನ್ನಲ್ಲೇ, ಐಟಿ ಅಧಿಕಾರಿಗಳು ಅಂಬಿಕಾಪತಿ ಅವರ ನಿವಾಸದಲ್ಲಿ ತಂಗಿದ್ದು, ಶನಿವಾರವೂ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇನ್ನು ಮಾನ್ಯತಾ ಟೆಕ್ ಪಾರ್ಕ್ನ ಮನೆಯಲ್ಲಿ ಐಟಿ ಅಧಿಕಾರಿಗಳ ಶೋಧ ಕಾರ್ಯ ಮುಂದುವರೆದಿದೆ.
ಶುಕ್ರವಾರ ರಾತ್ರಿ ಲಾಕರ್ನಲ್ಲಿ ಎರಡು ಸೂಟ್ ಕೇಸ್ ಪತ್ತೆಯಾಗಿವೆ. ಇದರಲ್ಲಿ ಅಶ್ವಥಮ್ಮ, ಅಂಬಿಕಾಪತಿ ಅವರ ಆಸ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳು ದೊರೆತಿವೆ.
ಸದ್ಯ ಅಧಿಕಾರಿಗಳು ಚಿನ್ನಾಭರಣ, ನಗದು ಹಣ, ದಾಖಲೆ ಪತ್ರಗಳು ಎಲ್ಲವನ್ನೂ ಕ್ರೋಡೀಕರಿಸಿ ಲೆಕ್ಕ ಹಾಕಿ ಜಪ್ತಿ ಮಾಡಿದ್ದಾರೆ.
“ಕಳೆದ 15 ವರ್ಷಗಳಿಂದ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದೇವೆ. ಐಟಿ ದಾಳಿ ವೇಳೆ, ದೊರೆತ ₹42 ಕೋಟಿ ಹಣದ ಬಗ್ಗೆ ಐಟಿ ಇಲಾಖೆಗೆ ವಿವರಣೆ ನೀಡುತ್ತೇವೆ. ಹಾಗೆಯೇ, ನಮ್ಮ ಕೆಲವು ಆಸ್ತಿಯನ್ನು ಮಾರಾಟ ಮಾಡಿದ ಹಣವನ್ನು ಮನೆಯಲ್ಲಿ ಇಡಲಾಗಿತ್ತು. ಎಲ್ಲ ದಾಖಲೆಗಳನ್ನು ನೀಡಿ, ಹಣವನ್ನು ಬಿಡಿಸಿಕೊಳ್ಳುತ್ತೇವೆ. ಈ ದುಡ್ಡಿಗೂ ನಮ್ಮ ತಂದೆ ಅಂಬಿಕಾಪತಿ ಅವರಿಗೂ ಯಾವುದೇ ಸಂಬಂಧವಿಲ್ಲ. ಸುಮ್ಮನೆ ಅವರನ್ನು ಈ ವಿಚಾರದಲ್ಲಿ ಎಳೆದು ತರಬೇಡಿ. ಐಟಿ ಅಧಿಕಾರಿಗಳು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ವಿಚಾರಣೆಗೆ ಹಾಜರಾಗುತ್ತೇನೆ” ಎಂದು ಅಂಬಿಕಾಪತಿ ಪುತ್ರ ಪ್ರದೀಪ್ ತಿಳಿಸಿದ್ದಾರೆ.
₹42 ಕೋಟಿಗೂ ಅಧಿಕ ಹಣಕ್ಕೆ ಅಂಬಿಕಾಪತಿ ಕುಟುಂಬ ಲೆಕ್ಕ ಕೊಡಬೇಕಿದೆ. ಹಣದ ಮೂಲ ಕೆದಕುವುದಕ್ಕೆ ಮುಂದಾಗಿರುವ ಐಟಿ ಅಧಿಕಾರಿಗಳು ಮಂಗಳವಾರದಿಂದ ತನಿಖೆ ಆರಂಭಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಚದಡಿ ₹42 ಕೋಟಿ ನಗದು ಪತ್ತೆ; ಅಂಬಿಕಾಪತಿ ದಂಪತಿ ಬಂಧನ ಸಾಧ್ಯತೆ
ಐಟಿ ಅಧಿಕಾರಿಗಳು ಗುರುವಾರ ಚಿನ್ನದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾಗ ಭಾರೀ ಪ್ರಮಾಣದ ನಗದು ಸಂಗ್ರಹವಾಗಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ಆ ಮಾಹಿತಿ ಆಧರಿಸಿ ಅಂಬಿಕಾಪತಿ ನಿವಾಸದ ಮೇಲೆ ದಾಳಿ ಮಾಡಿದಾಗ ಮಂಚದ ಕೆಳಗೆ ಕಂತೆ ಕಂತೆ ನಗದು ಪತ್ತೆಯಾಗಿತ್ತು.
ಪಂಚರಾಜ್ಯ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಈ ಭಾರೀ ಮೊತ್ತದ ಹಣವನ್ನು ಎಲೆಕ್ಷನ್ ಫಂಡಿಂಗ್ ನೀಡಲು ಸಿದ್ದತೆ ನಡೆದಿತ್ತು ಎಂದು ತಿಳಿದು ಬಂದಿದೆ. ಆದರೆ ಐಟಿ ಅಧಿಕಾರಿಗಳು ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ಮಾಡಿ ಮಂಚದಡಿ ಸಂಗ್ರಹಿಸಿಟ್ಟ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ
ಗುತ್ತಿಗೆದಾರ ಅಂಬಿಕಾಪತಿ ಮನೆ, ಆರ್ಟಿ ನಗರದ ವೈಟ್ ಗೌಸ್ನಲ್ಲಿರುವ ಅಂಬಿಕಾಪತಿ ಮಗಳ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಒಂದು ಮನೆ ಮತ್ತು ಆರ್ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಎರಡು ಕಡೆ ದಾಳಿ ಮಾಡಲಾಗಿತ್ತು.