ಬೀದರ್ ತಾಲೂಕಿನ ಆಣದೂರು ಗ್ರಾಮ ಪಂಚಾಯತಿಯಲ್ಲಿ ಮನರೇಗಾ ಯೋಜನೆಯಡಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಖಾದರನಗರ ಗ್ರಾಮಸ್ಥರಾದ ಗೋವಿಂದ ಜಾಲಿ ಹಾಗೂ ಅನೀಲ್ ಸೈಯದಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದ ಅವರು, “ಆಣದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾದರನಗರ ಗ್ರಾಮದಲ್ಲಿ ಮಹಾದೇವ ಮಂದಿರ ಹತ್ತಿರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿರುವ ಗುಂಡಿ ಹಾಗೂ ಸಸಿ ನೆಡುವ ಕಾಮಗಾರಿಯಲ್ಲಿ ಅವ್ಯವಾಹರ ನಡೆದಿದೆ” ಎಂದು ಆರೋಪಿಸಿದರು.
“2023- 24ನೇ ಸಾಲಿನ ಮನರೇಗಾ ಯೋಜನೆ ಅಡಿಯಲ್ಲಿ ಖಾದರನಗರ ಗ್ರಾಮದಲ್ಲಿ ಅಂದಾಜು 2 ಲಕ್ಷ ರೂ. ಅನುದಾನದಲ್ಲಿ ಕೇವಲ 80 ಗುಂಡಿ ಮಾತ್ರ ತೋಡಿ ಸಸಿ ನೆಟ್ಟಿದ್ದಾರೆ. ಈ ಕಾಮಗಾರಿಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಕೆಲಸ ನೀಡದೆ ಕೆಲಸ ಮಾಡದೇ ಇರುವ ಕಾರ್ಮಿಕರ ಖಾತೆಗೆ ಕೂಲಿ ಹಣ ವರ್ಗಾಯಿಸಿದ್ದಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅನುಮತಿ ಇಲ್ಲದೆ ಪಟಾಕಿ ಅಂಗಡಿ ತೆರೆದರೆ ಕ್ರಿಮಿನಲ್ ಪ್ರಕರಣ; ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಎಚ್ಚರಿಕೆ
ಈ ಅವ್ಯವಹಾರದಲ್ಲಿ ಭಾಗಿಯಾದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮನರೇಗಾ ಸಹಾಯಕ ಇಂಜಿನಿಯರ್ ಅವರು ಸರ್ಕಾರದ ಹಣ ಲೂಟಿ ಹೊಡೆದು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಸದರಿ ಕಾಮಗಾರಿ ಬಿಲ್ ತಡೆಹಿಡಿದು ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಕುಲಂಕುಶವಾಗಿ ಪರಿಸೀಲಿಸಿ ನಿಜವಾದ ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು” ಅವರು ಒತ್ತಾಯಿಸಿದರು.