ಗಾಝಾ | ಅನ್ನ, ನೀರಿಗಾಗಿ ಅಲೆದಾಡುತ್ತ ಊರು ಬಿಡುತ್ತಿರುವ ಜನರನ್ನೂ ಬೆಂಬಿಡದ ಇಸ್ರೇಲ್

Date:

Advertisements

ಕಳೆದ ಶನಿವಾರ ಹಮಸ್ ಇಸ್ರೇಲ್‌ ಮೇಲೆ ದಾಳಿ ನಡೆಸಿದ ಬಳಿಕ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್, ಗಾಝಾಪಟ್ಟಿ ಮೇಲೆ ನಿರಂತರವಾಗಿ ಬಾಂಬ್‌ ಮಳೆ ಸುರಿಸುತ್ತಲೇ ಇದೆ. ಅದರ ಜೊತೆಗೆ 24 ಗಂಟೆಗಳ ಒಳಗೆ ಗಾಝಾಪಟ್ಟಿ ಬಿಟ್ಟು ಹೊರಡಿ, ಅಲ್ಲಿ ನಮ್ಮ ಭೂ ಕಾರ್ಯಾಚರಣೆ ಆರಂಭವಾದ ಬಳಿಕ ನೀವು ಅಲ್ಲಿದ್ದರೆ ಅದಕ್ಕೆ ನಾವು ಹೊಣೆಯಲ್ಲ ಎಂದು ಪ್ಯಾಲೆಸ್ತೀನ್ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ಗಾಝಾ ಬಿಟ್ಟು ತೆರಳುವ ಆದೇಶ ಬಂದ ಬಳಿಕ ಲಾರಿಯೊಂದರಲ್ಲಿ ಸುರಕ್ಷಿತ ಪ್ರದೇಶವನ್ನು ಹುಡುಕಿ ಹೋಗುತ್ತಿದ್ದವರ ಮೇಲೂ ಇಸ್ರೇಲ್ ದಾಳಿ ನಡೆಸಿರುವುದಾಗಿ ಪ್ಯಾಲೆಸ್ತೀನ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ದಾಳಿಯಿಂದ 70 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹಮಸ್ ಅನ್ನು ಸದೆ ಬಡಿಯುವುದಾಗಿ ಘೋಷಿಸಿರುವ ಇಸ್ರೇಲ್, ಗಾಝಾ ಪಟ್ಟಿಯೊಳಗೆ ನುಗ್ಗಿ ಭೂ ಕಾರ್ಯಾಚರಣೆ ನಡೆಸಲು ತಯಾರಿ ನಡೆಸುತ್ತಿದೆ. ಅಲ್ಲದೇ, ಹೆಲಿಕಾಪ್ಟರ್ ಮೂಲಕ ಕರಪತ್ರಗಳನ್ನು ಗಾಝಾ ನಗರದಾದ್ಯಂತ ಸುರಿದು, ‘ಗಾಝಾ ಬಿಟ್ಟು ತೆರಳಬೇಕು, ಮುಂದಿನ ಸೂಚನೆಯವರೆಗೆ ಬರಬೇಡಿ’ ಎಂದು ತಿಳಿಸಿದೆ.

Advertisements

WhatsApp Image 2023 10 15 at 6.06.22 PM

ಉತ್ತರದಿಂದ ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್ ಸೂಚಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನಾಗರಿಕರು ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಗಾಝಾಪಟ್ಟಿಯಿಂದ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಪ್ಯಾಲೆಸ್ತೀನಿನ ಜನ, ತಮ್ಮ ಬಟ್ಟೆ ಬರೆ ಹಾಗೂ ಅಗತ್ಯ ವಸ್ತುಗಳ ಸಮೇತ ಸಿಕ್ಕ ಸಿಕ್ಕ ವಾಹನಗಳಲ್ಲಿ ದಕ್ಷಿಣಕ್ಕೆ ತೆರಳುತ್ತಿದ್ದಾರೆ.

WhatsApp Image 2023 10 15 at 6.05.52 PM

ಕಾರು, ಲಾರಿಗಳಲ್ಲಿ ಹಾಸಿಗೆ, ಬಟ್ಟೆ, ಮನೆಯ ದಿನ ಬಳಕೆಯ ವಸ್ತುಗಳನ್ನು ಹೇರಿಕೊಂಡು ಗಾಝಾಪಟ್ಟಿಯ ಜನ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ನಡುವೆ ಹೇಳಿಕೆ ಬಿಡುಗಡೆ ಮಾಡಿದ್ದ ಹಮಸ್, ‘ನಿಮ್ಮ ಊರನ್ನು ಬಿಟ್ಟು ತೆರಳಬಾರದು. ಆದೇಶ ಪಾಲಿಸಬೇಡಿ. ನಿಮ್ಮ ಮನೆಗಳಲ್ಲಿ ಸ್ಥಿರವಾಗಿರಿ ಮತ್ತು ಇಸ್ರೇಲ್ ವಿರುದ್ಧ ದೃಢವಾಗಿ ನಿಲ್ಲಿ’ ಎಂದು ತಿಳಿಸಿದೆ.

food

ಗಾಝಾ ನಗರ, ಬೈತ್ ಲಹಿಯಾ, ಬೈತ್ ಹನೌನ್ ಹಾಗೂ ಜಬೀಲಾ ಆರ್‌.ಸಿ.ನಗರಗಳಲ್ಲಿ ವಾಸವಿದ್ದ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ದಕ್ಷಿಣ ಗಾಝಾದತ್ತ ಹೊರಟಿದ್ದಾರೆ. ಸುಮಾರು 11 ಲಕ್ಷದಷ್ಟು ಮಂದಿ ಉತ್ತರ ಗಾಝಾದಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಒಟ್ಟು ಗಾಝಾದ ಜನಸಂಖ್ಯೆಯ ಅರ್ಧದಷ್ಟು ಜನ.

Gaza Jana

ಇಸ್ರೇಲ್ ಸೇನೆ ಯಾವುದೇ ಕ್ಷಣದಲ್ಲೂ ಗಾಝಾಪಟ್ಟಿಗೆ ಭೂ ಸೇನೆ ನುಗ್ಗಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜನರು ಆತಂಕದಲ್ಲಿದ್ದಾರೆ. ಈ ನಡುವೆ, ನೀವು (ಇಸ್ರೇಲ್) ಒಂದು ವೇಳೆ ಗಾಝಾಕ್ಕೆ ನುಗ್ಗಿದರೆ ಪರಿಸ್ಥಿತಿ ಯಾವ ರೀತಿ ಇರಲಿದೆ ಎಂದು ಹಮಸ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಆ ಮೂಲಕ ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ.

ಇಸ್ರೇಲ್ ದೇಶವು ಪ್ಯಾಲಿಸ್ತೇನ್‌ನ ಗಾಝಾಪಟ್ಟಿ ಪ್ರಾಂತ್ಯಕ್ಕೆ ಸುಮಾರು 3 ಲಕ್ಷ ಮೀಸಲು ಪಡೆ ಯೋಧರನ್ನು ರವಾನೆ ಮಾಡಲು ಸಿದ್ಧತೆ ನಡೆಸಿದೆ. ಜೊತೆಯಲ್ಲೇ ಬೃಹತ್ ಪ್ರಮಾಣದ ಯುದ್ದ ಟ್ಯಾಂಕರ್‌ಗಳು ಹಾಗೂ ಮಿಲಿಟರಿ ವಾಹನಗಳನ್ನು ಇಸ್ರೇಲ್-ಗಾಝಾಪಟ್ಟಿಯ ಗಡಿಭಾಗದಲ್ಲಿ ತಂದು ನಿಲ್ಲಿಸಿದೆ.

isreal border

ಹಮಸ್ ಅನ್ನು ನಿರ್ನಾಮ ಮಾಡುತ್ತೇವೆ ಎಂದು ಪಣ ತೊಟ್ಟಿರುವ ಇಸ್ರೇಲ್, ಯುದ್ಧ ಆರಂಭವಾದ ಎರಡನೇ ದಿನದಲ್ಲಿ ಸಂಪೂರ್ಣ ಮುತ್ತಿಗೆ ಹಾಕುವುದಾಗಿ ಘೋಷಿಸಿತ್ತು. ಅದರ ಭಾಗವಾಗಿ ಗಾಝಾಪಟ್ಟಿಗೆ ನೀರು, ವಿದ್ಯುತ್ ಹಾಗೂ ಆಹಾರ ಪೂರೈಕೆಯನ್ನೂ ಸ್ಥಗಿತಗೊಳಿಸಿತ್ತು.

ಇಸ್ರೇಲಿ ಮುತ್ತಿಗೆಯಿಂದ ಉಂಟಾದ ನೀರು ಮತ್ತು ವೈದ್ಯಕೀಯ ಸರಬರಾಜುಗಳ ಕೊರತೆಯಿಂದಾಗಿ ಗಾಝಾ ಈಗಾಗಲೇ ಮಾನವೀಯ ಬಿಕ್ಕಟ್ಟಿನಲ್ಲಿದೆ. ಇಸ್ರೇಲ್‌ನ ವಾಯುದಾಳಿಗೆ ಸಿಲುಕಿ ಮನೆಗಳ ಜೊತೆಗೆ ಅಂಗಡಿಗಳು ಕೂಡ ನಾಶವಾಗಿರುವುದರಿಂದ ಜನ ಅನ್ನಾಹಾರವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇರುವ ಕೆಲವೊಂದು ಬೇಕರಿಗಳ ಮುಂದೆ ಬ್ರೆಡ್ ಖರೀದಿಸಲು ಜನರು ಕ್ಯೂನಲ್ಲಿ ನಿಂತಿರುವ ದೃಶ್ಯವನ್ನು ‘ಅಲ್-ಜಝೀರಾ’ ವರದಿ ಮಾಡಿದೆ.

ಈ ಮಧ್ಯೆ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಆಹಾರಧಾನ್ಯಗಳನ್ನು ಗಾಝಾದ ಮಕ್ಕಳು ಹುಡುಕುತ್ತಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಹಲವು ಮಂದಿ ಗಾಝಾದ ಜನರ ಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾರೆ.

ಐಸ್‌ಕ್ರೀಮ್‌ ಬಾಕ್ಸ್‌ಗಳಲ್ಲಿ ಮೃತದೇಹಗಳು!
ಇಸ್ರೇಲ್‌ನ ವೈಮಾನಿಕ ದಾಳಿಯಿಂದಾಗಿ ಗಾಝಾದಲ್ಲಿ ಇಲ್ಲಿಯವರೆಗೂ 724 ಮಕ್ಕಳು ಸೇರಿದಂತೆ ಕನಿಷ್ಠ 2,215 ಮಂದಿ ಸಾವನ್ನಪ್ಪಿದ್ದಾರೆ. ಎಂಟು ಸಾವಿರಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ ಎಂದು ಪ್ಯಾಲೆಸ್ತೀನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

‘ಗಾಝಾ ಆಸ್ಪತ್ರೆಗಳಲ್ಲಿ ಮೃತದೇಹಗಳನ್ನು ಇಡಲು ಸ್ಥಳವಿಲ್ಲ. ಹಾಗಾಗಿ, ಈ ಮೊದಲು ಐಸ್‌ಕ್ರೀಮ್‌ ಹಾಗೂ ಆಹಾರ ಧಾನ್ಯಗಳಿಗಾಗಿ ಬಳಸಲಾಗುತ್ತಿದ್ದ ರೆಫ್ರಿಜರೇಟರ್‌ಗಳಲ್ಲಿ ಇಡುತ್ತಿದ್ದೇವೆ. ಇದು ಸದ್ಯದ ಆಸ್ಪತ್ರೆಯ ಪರಿಸ್ಥಿತಿ’ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮೃತದೇಹಗಳನ್ನು ರೆಫ್ರಿಜರೇಟರ್ ಟ್ರಕ್‌ಗಳಲ್ಲಿ ತುಂಬಿಸಿಟ್ಟಿರುವುದನ್ನು ತೋರಿಸಿದ್ದು, ಕಣ್ಣೀರು ತರಿಸುತ್ತದೆ.

ಈ ನಡುವೆ ಇಸ್ರೇಲ್‌ನ ನಡೆಯನ್ನು ಖಂಡಿಸಿರುವ ರೆಡ್ ಕ್ರಾಸ್ ಸಂಸ್ಥೆ, ‘ಇಸ್ರೇಲ್ ಮೇಲಿನ ಹಮಸ್‌ನ ಬೃಹತ್ ದಾಳಿಯು ಗಾಝಾಪಟ್ಟಿಯ ಅನಿಯಮಿತ ವಿನಾಶವನ್ನು ಸಮರ್ಥಿಸುವುದಿಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

‘ಯುದ್ಧದ ವಿಧಾನ ಮತ್ತು ಯುದ್ಧದಲ್ಲಿ ಬಳಸುವ ಅಸ್ತ್ರಗಳಿಗೆ ಸಂಬಂಧಿಸಿದ ತಮ್ಮ ಕಾನೂನು ಬದ್ಧತೆಯನ್ನು ಯಾರೂ ಕಡೆಗಣಿಸಬಾರದು’ ಎಂದಿದೆ.

ವಿಶ್ವಸಂಸ್ಥೆ ಅಸಮಾಧಾನ
ಇಸ್ರೇಲ್ ಸೇನೆಯು ಗಾಝಾದ ಜನರಿಗೆ ನೀಡಿರುವ ಸ್ಥಳಾಂತರ ಆದೇಶವನ್ನು ಖಂಡಿಸಿರುವ ವಿಶ್ವಸಂಸ್ಥೆ, ಈ ಆದೇಶವು ವಿನಾಶಕಾರಿ ಮಾನವೀಯ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಹೇಳಿದೆ.

“ಇನ್ಕ್ಯುಬೇಟರ್‌ಗಳಲ್ಲಿ ನವಜಾತ ಶಿಶುಗಳು ಮತ್ತು ತೀವ್ರ ನಿಗಾದಲ್ಲಿರುವ ಜನರು ಸೇರಿದಂತೆ ಉತ್ತರದ ಆಸ್ಪತ್ರೆಗಳಲ್ಲಿನ 2,000ಕ್ಕೂ ಹೆಚ್ಚು ರೋಗಿಗಳ ಸ್ಥಳಾಂತರಿಸುವ ಇಸ್ರೇಲ್‌ನ ಆದೇಶವು ಮರಣದಂಡನೆಗೆ ಸಮನಾಗಿರುತ್ತದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಈಜಿಪ್ಟ್, ಗಾಝಾಕ್ಕೆ ಮಾನವೀಯ ನೆರವು ನೀಡಲು ಮುಂದೆ ಬಂದಿದ್ದು, ಗಡಿ ತೆರವು ಮಾಡುವಂತೆ ಇಸ್ರೇಲ್‌ನೊಂದಿಗೆ ಕೇಳಿಕೊಂಡಿದೆ. ಆಹಾರ ಸಾಮಗ್ರಿಗಳ ಸಹಿತ ನೂರಾರು ಅಗತ್ಯ ವಸ್ತುಗಳನ್ನು ಹೊತ್ತು ತಂದಿರುವ ಸುಮಾರು ಟ್ರಕ್‌ಗಳು ಗಡಿಯಲ್ಲಿ ನಿಂತಿರುವ ದೃಶ್ಯವು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಒಟ್ಟಿನಲ್ಲಿ ಹಮಸ್ ಮತ್ತು ಇಸ್ರೇಲ್‌ ನಡುವಿನ ಯುದ್ಧವು ಅಮಾಯಕ ನಾಗರಿಕರ ಬದುಕನ್ನು ಛಿದ್ರಗೊಳಿಸಿದೆ. ಯುದ್ಧ ಯಾವಾಗ ನಿಲ್ಲುತ್ತದೆ ಎಂಬ ನಂಬಿಕೆ ಹೆಚ್ಚಿನ ಮಂದಿಗಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X