ಯುಎಪಿಎ(ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ) ಅಡಿ ಬಂಧಿಸಿ ಪೊಲೀಸ್ ವಶಕ್ಕೆ ನೀಡಿರುವ ಕ್ರಮವನ್ನು ರದ್ದುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿರುವುದರಿಂದ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪುರಕಾಯಸ್ಥ ಮತ್ತು ಚಕ್ರವರ್ತಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಅರ್ಜಿಗಳನ್ನು ಗಮನದಲ್ಲಿಟ್ಟುಕೊಂಡು, ಈ ಪ್ರಕರಣವು ತುರ್ತು ವಿಚಾರಣೆಯ ಅಗತ್ಯವಿದೆ ಮತ್ತು ಪ್ರಕರಣದ ದಾಖಲೆಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಲು ಸೂಚಿಸಿತು.
“ಇದು ನ್ಯೂಸ್‌ಕ್ಲಿಕ್ ವಿಷಯವಾಗಿದೆ. ಪತ್ರಕರ್ತರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇಲ್ಲಿ ಆರೋಪಿಗಳಲ್ಲಿ ಒಬ್ಬರು 75 ವರ್ಷದ ವ್ಯಕ್ತಿ” ಎಂದು ವಕೀಲರಾದ ಸಿಬಲ್ ಹೇಳಿದರು. ನಂತರ ವಿಚಾರಣಾ ದಿನಾಂಕದ ಕುರಿತು ನಿರ್ಧರಿಸುವುದಾಗಿ ಸಿಬಲ್ ಅವರಿಗೆ ಪೀಠವು ತಿಳಿಸಿತು.
ಈ ಸುದ್ದಿ ಓದಿದ್ದೀರಾ? ‘ಮೇಕ್ ಮೈ ಟ್ರಿಪ್’ ಜಾಹೀರಾತು ಕ್ರೀಡಾ ಮನೋಭಾವದ ವಿರುದ್ಧ; ಕೋಮುವಾದವನ್ನು ಕೆದಕುವ ಕುಚೇಷ್ಟೆ
ಅಕ್ಟೋಬರ್ 13 ರಂದು, ದೆಹಲಿ ಹೈಕೋರ್ಟ್ ಪೀಠವು ಪ್ರಕರಣದಲ್ಲಿ ಪುರ್ಕಾಯಸ್ಥ ಮತ್ತು ಚಕ್ರವರ್ತಿ ಅವರ ಬಂಧನ ಮತ್ತು ಪೊಲೀಸ್ ವಶಕ್ಕೆ ನೀಡಿರುವ ಕ್ರಮವನ್ನು ರದ್ದುಗೊಳಿಸುವ ಮನವಿಯನ್ನು ವಜಾಗೊಳಿಸಿತು. ಅಕ್ಟೋಬರ್ 3 ರಂದು ದೆಹಲಿ ಪೊಲೀಸರ ವಿಶೇಷ ಘಟಕ ಇಬ್ಬರನ್ನೂ ಬಂಧಿಸಿ, ಇಬ್ಬರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು.
ಪೊಲೀಸ್ ಕಸ್ಟಡಿಯನ್ನು ಪ್ರಶ್ನಿಸಿ ಪುರ್ಕಾಯಸ್ಥ ಹಾಗೂ ಅಮಿತ್ ಚಕ್ರವರ್ತಿ ಅವರು ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ ತಕ್ಷಣ ಬಿಡುಗಡೆಗೆ ಕೋರಿದ್ದರು.
ಪುರ್ಕಾಯಸ್ಥ ಹಾಗೂ ಚಕ್ರವರ್ತಿ ಅವರ ವಾದವನ್ನು ಇತ್ತೀಚೆಗೆ ತಳ್ಳಿ ಹಾಕಿದ್ದ ದೆಹಲಿ ಹೈಕೋರ್ಟ್, ಕಠಿಣ ಅಕ್ರಮ ಚಟುವಟಿಕೆಗಳ ನಿಗ್ರಹ ಕಾಯ್ದೆ ಅಡಿ ಯಾವುದೇ ವ್ಯಕ್ತಿಯನ್ನು ವಶಕ್ಕೆ ಪಡೆದು ಬಂಧಿಸುವಾಗ, ಅಂಥವರಿಗೆ ಪೊಲೀಸರು ಲಿಖಿತ ವಿವರಣೆ ನೀಡಬೇಕಿಲ್ಲ ಎಂದು ಅಭಿಪ್ರಾಯ ಪಟ್ಟಿತ್ತು.
ಚೀನಾ ಪರ ಪ್ರಚಾರ ಮಾಡಲು ಹಣ ಪಡೆದ ಆರೋಪದಲ್ಲಿ ನ್ಯೂಸ್‌ಕ್ಲಿಕ್ ಸಂಸ್ಥೆಯ ಇಬ್ಬರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Nice