ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ ಮದ್ಯ ವ್ಯಸನಿಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕಾಲೇಜಿನ ಮೈದಾನಕ್ಕೆ ಸೂಕ್ತ ಕಾವಲು ಹಾಗೂ ತಡೆಗೋಡೆ ಇಲ್ಲದ ಕಾರಣ ಮದ್ಯ ವ್ಯಸನಿಗಳು ರಾತ್ರಿಯಾದರೆ ಇಲ್ಲಿಯೇ ಮದ್ಯಪಾನ ಕೂಟ ನಡೆಸುತ್ತಾರೆ. ಅಲ್ಲದೆ ಮದ್ಯ ಸೇವಿಸಿ, ಬಾಟಲಿಗಳನ್ನು ಮೈದಾನದಲ್ಲಿಯೇ ಬಿಸಾಡಿ ಹೋಗಿರುತ್ತಾರೆ. ಇಲ್ಲವೇ ಒಡೆದು ಹಾಕಿರುತ್ತಾರೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಕಾಲೇಜು ಮೈದಾನದಲ್ಲಿ ವಾಯುವಿಹಾರ ಮಾಡುವವರ ಕಾಲಿಗೆ ಗಾಜು ಚುಚ್ಚಿಕೊಂಡು ಗಾಯವಾಗಿತ್ತು. ಮದ್ಯ ವ್ಯಸನಿಗಳ ಕಾಟದಿಂದ ಮಹಿಳೆಯರು, ಹಿರಿಯರು ಇಲ್ಲಿ ಸಂಜೆ ವೇಳೆ ವಾಯುವಿಹಾರಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ” ಎಂದು ದೂರಿದ್ದಾರೆ.
“ಕಾಲೇಜಿನ ಮೈದಾನ ಸ್ವಚ್ಛತೆ ಪೌರಕಾರ್ಮಿಕರಿಗೆ ಸವಾಲಾಗಿದ್ದು, ನಿತ್ಯ ಬಾಟಲಿ ಚೂರುಗಳನ್ನು ಎತ್ತುವ ಪೌರಕಾರ್ಮಿರಿಗೆ ಗಾಜು ಚುಚ್ಚಿಕೊಂಡು ಗಾಯಗೊಂಡಿದ್ದಾರೆ. ಹಾಗಾಗಿ ಮೈದಾನದ ಸುತ್ತಲೂ ವಿದ್ಯುತ್ ದೀಪ ಅಳವಡಿಸಬಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ಮೇಲೆ ಪ್ರಕರಣ ದಾಖಲಿಸಬೇಕು. ಸಂಜೆ 7 ಗಂಟೆಯ ನಂತರ ಇಲ್ಲಿಗೆ ಬೀಟ್ ವ್ಯವಸ್ಥೆ ಹೆಚ್ಚಿಸಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
“ಪಟ್ಟಣದಲ್ಲಿರುವ ಏಕೈಕ ಮೈದಾನ ಇದಾಗಿದೆ. ಈ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳನ್ನೂ ಆಚರಿಸಲಾಗುತ್ತದೆ. ನಮ್ಮ ಕಾರ್ಮಿಕರು ಸ್ವಚ್ಚತೆ ಮಾಡುವಾಗ ಹಲವರು ಗಾಯಗೊಂಡಿರುವ ಉದಾಹರಣೆಗಳೂ ಇವೆ. ಮೈದಾನಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸುವ ವಿಚಾರವನ್ನು ಸಭೆಯಲ್ಲಿ ಮಂಡನೆ ಮಾಡಿ ಅನುದಾನ ಕ್ರೋಢೀಕರಣ ಮಾಡಿಕೊಂಡು ಕ್ರಮಕೈಗೊಳ್ಳಲಾಗುತ್ತದೆ” ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಹೇಳಿದ್ದಾರೆ.