ರಾಜ್ಯದಲ್ಲಿ ಶೇ.40ಕ್ಕೂ ಅಧಿಕ ಮಂದಿ ಸ್ಲಂಗಳನ್ನು ಅವಲಂಬಿಸಿದ್ದು, ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸ್ಲಂ ಜನಾಂದೋಲನ ಸಂಚಾಲಕ ಎ ನರಸಿಂಹಮೂರ್ತಿ ಹೇಳಿದರು.
ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಜಿ.ಜಿ.ವಿ ರೂರಲ್ ಡೆವಲಪ್ಮೆಂಟ್ ಸಂಯುಕ್ತಾಶ್ರಯದಲ್ಲಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ, ಕ್ಯಾತ್ಸಂದ್ರ ಎಳ್ಳರಬಂಡೆ ಸ್ಲಂ ಶಾಖೆಯಲ್ಲಿ, ಕುಂದು ಕೊರತೆ ಹಾಗೂ ಸ್ಲಂ ಘೋಷಣೆ, ಹಕ್ಕುಪತ್ರ ಹಾಗೂ ಸಾಮಾಜಿಕ, ಆರ್ಥಿಕ ಸಮೀಕ್ಷೆ ಕುರಿತು ಮುಂದಿನ ಹೋರಾಟಗಳ ಬಗ್ಗೆ ಬಹಿರಂಗ ಸಭೆ ನಡೆಸಿದರು.
ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ವಿವಿಧ ಕೌಶಲ್ಯಧಾರಿತ ತರಬೇತಿಗಳಿಗೆ ಜಾಗೃತಿ ಹಾಗೂ ನೊಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಎ.ನರಸಿಂಹಮೂರ್ತಿ ಮಾತನಾಡಿದರು. ಸರ್ಕಾರ, ನಗರಕ್ಕಾಗಿ ದುಡಿಯುವ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಜನರು ಸಂವಿಧಾನದ ಹಕ್ಕುಗಳನ್ನು ಪಡೆಯಬೇಕೆಂದರೆ, ಒಗ್ಗಟ್ಟಾಗಿ ಹೋರಾಟಕ್ಕೆ ಇಳಿಯಬೇಕು. ಸರ್ಕಾರಿ ಸವಲತ್ತು ಪಡೆಯಬೇಕೆಂದರೆ ಎಲ್ಲರೂ ಸಂಘಟಿತರಾಗಬೇಕು ಎಂದರು.
ಎಳ್ಳರಬಂಡೆ ಸ್ಲಂ ನಿವಾಸಿಗಳಿಗೆ, ವಸತಿ ಹಕ್ಕು ಪತ್ರ ಮತ್ತು ಮೂಲಭೂತ ಸೌಕರ್ಯ ಒದಗಿಸಲು ಸ್ಲಂ ಸಂಘಟನೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ. ಸತತ 12ವರ್ಷಗಳ ಪ್ರಯತ್ನವಾಗಿ, ಕ್ಯಾತ್ಸಂದ್ರ ಎಳ್ಳರಬಂಡೆ ಅನಧಿಕೃತ ಎಂಬ ಹಣೆ ಪಟ್ಟಿಯಿಂದ, ಅಭಿವೃದ್ಧಿ ಕುಂಠಿತವಾಗಿದೆ. ಆದರೆ, ಸಂಘಟಿತ ಹೋರಾಟದಿಂದ ಸ್ಲಂ ಘೋಷಣೆಗೊಂಡು ಅಭಿವೃದ್ಧಿಗೆ ಸಿದ್ಧವಾಗಲಿದೆ. ಇಂತಹ ದನಿ ಇಲ್ಲದವರ ದನಿಯಾಗಿ ಸಂಘಟನೆ ನಗರದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಜಾಬೀರ್ಖಾನ್ ಮಾತನಾಡಿ, ತುಮಕೂರು ನಗರದ 34ನೇ ವಾರ್ಡ್ ವ್ಯಾಪ್ತಿಯ, ಎಳ್ಳರಬಂಡೆ ಸ್ಲಂ ಅನ್ನು, ಬಂಡೆ ಮೇಲಿದ್ದಿರಾ ಎಂಬ ಕಾರಣಗಳಿಂದ, ಹಲವು ಅಭಿವೃದ್ಧಿ ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ. ಕೊಳಗೇರಿ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಡಳಿತದ ಗಮನ ಸೆಳೆದು ಹಲವು ಹೋರಾಟಗಳ ಪರಿಣಾಮವಾಗಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಕಾಯಿದೆ 1973 ಕಲಂ 3ರಡಿಯಲ್ಲಿ, ಪ್ರಥಮ ಅಧಿಸೂಚನೆಯನ್ನು ಜಿಲ್ಲಾಡಳಿತದಿಂದ ಹೊರಡಿಸಿ ಸ್ಲಂ ಘೋಷಣೆ ಮಾಡಿಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ವಾಸಿಸುವ ಎಲ್ಲಾ 104 ಕುಟುಂಬಗಳಿಗೆ ಹಕ್ಕುಪತ್ರ ವಸತಿ ಸೌಲಭ್ಯಗಳು ದೊರಕಲಿವೆ ಎಂದರು.
ಕಾರ್ಯಕ್ರಮದಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ಅನುಪಮಾ, ಜಿಜಿವಿ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ದಯಾನಂದ್, ಮೋಹನ್ಕುಮಾರ್, ಶಿವಪ್ಪ, ಎಳ್ಳರಬಂಡೆ ಶಾಖಾ ಸಮಿತಿಯ ಮುಖಂಡರಾದ ನರಸಮ್ಮ, ಮುನೀರ್, ಮುಬೀನ್ತಾಜ್, ನಗೀನ, ರಫೀ, ಅತೀಕ್ಅಹ್ಮದ್, ಗೌರಮ್ಮ, ಶಯು, ಕೇಬಲ್ ಅಶೋಕ್, ಜಯಸಿಂಹ ಇನ್ನಿತರರು ಉಪಸ್ಥಿತರಿದ್ದರು.