ವೈದ್ಯಕೀಯ ಸಿಬ್ಬಂದಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿಎಚ್‌ಸಿ) ಅಸಮ ಹಂಚಿಕೆಯಿಂದಾಗಿ ಕರ್ನಾಟಕದ 30 ಜಿಲ್ಲೆಗಳಲ್ಲಿ ವೈದ್ಯಕೀಯ ವೃತ್ತಿಪರರ ಕೊರತೆ ಉಂಟಾಗಿದೆ. ರಾಜ್ಯವು ಸುಮಾರು 16,500 ಉದ್ಯೋಗಿಗಳ ಕೊರತೆಯಿಂದ ಬಳಲುತ್ತಿದೆ ಎಂದು ವರದಿ ಹೇಳಿದೆ.
2023ರ ಸೆಪ್ಟೆಂಬರ್‌ನಲ್ಲಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ವರದಿ ಬಿಡುಗಡೆ ಮಾಡಿದ್ದು, ಈ ಸಮಸ್ಯೆಯನ್ನು ಪರಿಹರಿಸುವ ಅಗತ್ಯವಿದೆ ಎಂದು ಒತ್ತಿಹೇಳಿದೆ.
ಬೆಂಗಳೂರು ನಗರ, ಬೆಳಗಾವಿ, ಮೈಸೂರು, ತುಮಕೂರು, ಹಾಸನ ಮತ್ತು ಮಂಡ್ಯದಲ್ಲಿ ಶೇ.39.1ರಷ್ಟು ನರ್ಸಿಂಗ್ ಸಿಬ್ಬಂದಿ ಕೊರತೆ ಇದೆ.
ಈ ವರದಿಯು ಕರ್ನಾಟಕದಾದ್ಯಂತ ಪಿಎಚ್‌ಸಿ ಹಾಗೂ ಸಿಬ್ಬಂದಿ ಕೊರತೆಯನ್ನು ಎತ್ತಿ ತೋರಿಸಿದೆ. 454 ಕೇಂದ್ರಗಳು (245 ನಗರ ಮತ್ತು 209 ಗ್ರಾಮೀಣ ಕೇಂದ್ರಗಳು) ಕೊರತೆಯಲ್ಲಿವೆ. ನಗರ ಪ್ರದೇಶಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳು ಲಭ್ಯವಿದ್ದರೂ, ಗ್ರಾಮೀಣ ಪ್ರದೇಶಗಳು ಕೊರತೆಯನ್ನು ಎದುರಿಸುತ್ತಲೇ ಇರುತ್ತವೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಸೌಲಭ್ಯಗಳಿಗೆ ಉತ್ತಮ ಪ್ರವೇಶದ ಅಗತ್ಯವಿದೆ ಎಂದು ವರದಿ ತಿಳಿಸಿದೆ.
ಆಯುಷ್ಮಾನ್ ಭಾರತ್ – ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಮಿಷನ್ ಅಡಿಯಲ್ಲಿ ಆರೋಗ್ಯ ರಕ್ಷಣೆ ಒದಗಿಸಲು 1,60,000 ಹಾಸಿಗೆಗಳು ಬೇಕಾಗಬಹುದು.
ವೈದ್ಯಕೀಯ ಶಿಕ್ಷಣದ ನಿರ್ದೇಶಕಿ ಡಾ.ಬಿ.ಎಲ್.ಸುಜಾತಾ ರಾಥೋಡ್ ಮಾತನಾಡಿ, “ರಾಷ್ಟ್ರೀಯ ವೈದ್ಯಕೀಯ ಮಂಡಳಿಯ (ಎನ್‌ಎಂಸಿ) ಮಾನದಂಡಗಳ ಪ್ರಕಾರ, ಹೆಚ್ಚಿನ ಸಂಸ್ಥೆಗಳು ಕನಿಷ್ಠ ಮಂಜೂರಾದ ಹುದ್ದೆಗಳಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳುತ್ತವೆ” ಎಂದು ವಿವರಿಸಿದರು.
“ಹೆಚ್ಚುವರಿ ರೋಗಿಯ ಹೊರೆಯನ್ನು ಪೂರೈಸಲು ಅಗತ್ಯವಿರುವ ಹುದ್ದೆಗಳನ್ನು ಮಂಜೂರು ಮಾಡದ ಕಾರಣ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಸಿಬ್ಬಂದಿ ಕೊರತೆಯಿಂದಾಗಿ ನೇಮಕಗೊಂಡ ವೈದ್ಯಕೀಯ ಸಿಬ್ಬಂದಿಗಳು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದರಿಂದ ಮಾನಸಿಕ ಆರೋಗ್ಯ ಮತ್ತು ಕೆಲಸದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ” ಎಂದು ಹೇಳಿದರು.
“ಅನೇಕ ಗ್ರಾಮೀಣ ಪ್ರದೇಶಗಳಲ್ಲಿ, ನಾಗರಿಕರು ಮೂಲಭೂತ ಆರೋಗ್ಯದ ಸಲುವಾಗಿನ ಚಿಕಿತ್ಸೆಯ ಅಗತ್ಯಗಳನ್ನು ಪೂರೈಸಲು ದೂರದ ಊರುಗಳಿಗೆ ತೆರಳುತ್ತಾರೆ. ಎಫ್‌ಐಸಿಸಿಐ ವರದಿಯು 500 ಹಾಸಿಗೆಗಳ ಬಹುಶಿಸ್ತೀಯ ಆಸ್ಪತ್ರೆಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದೆ. ಇದು ವೈದ್ಯಕೀಯ ಸಿಬ್ಬಂದಿಯನ್ನು ದೊಡ್ಡ ನಗರಗಳಿಗೆ ವಲಸೆ ಹೋಗುವ ಬದಲು ಸಣ್ಣ ಪಟ್ಟಣಗಳಲ್ಲಿ ಕೆಲಸ ಮಾಡಲು ಆಕರ್ಷಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಾವೇರಿಗಾಗಿ ಅ.17ರಂದು ವಿಧಾನಸೌಧ ಮುತ್ತಿಗೆ: ವಾಟಾಳ್ ನಾಗರಾಜ್
“ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸುವುದು, ಆರೋಗ್ಯ ವ್ಯವಸ್ಥೆಯನ್ನು ರಚಿಸುವುದು, ವೈದ್ಯಕೀಯ ಸಿಬ್ಬಂದಿ ಕೊರತೆಯನ್ನು ಪರಿಹರಿಸುವುದು, ಸಾಕಷ್ಟು ಮೂಲಸೌಕರ್ಯಗಳನ್ನು ನಿರ್ಮಿಸುವುದು ಮತ್ತು ಎಲ್ಲ ಉಪಕ್ರಮಗಳ ಸರಿಯಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯವು ಗಮನಹರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಆರೋಗ್ಯ ವ್ಯವಸ್ಥೆಯಲ್ಲಿನ ಬಹು ಅಂತರವನ್ನು ತುಂಬಬೇಕು ಮತ್ತು ಹೆಚ್ಚಿನ ಬಜೆಟ್ ಹಂಚಿಕೆಯನ್ನು ಮಾನವ ಸಂಪನ್ಮೂಲಗಳಲ್ಲಿ ಬಳಸಿಕೊಳ್ಳಬಹುದು. ಇತ್ತೀಚಿನ ತಂತ್ರಜ್ಞಾನದೊಂದಿಗೆ ವೈದ್ಯಕೀಯ ಮೂಲಸೌಕರ್ಯವನ್ನು ಸುಧಾರಿಸಬಹುದು” ಎಂದರು.