ಐದು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಶಕೀಲ್ ಅಕ್ತರ್ ಸೈಫಿ (28) ಹತ್ಯೆಯಾದ ವ್ಯಕ್ತಿ. ಇವರು ಕೋಗಿಲು ಲೇಔಟ್’ನ 3ನೇ ಕ್ರಾಸ್ ನಿವಾಸಿ. ಇವರು ಮೂಲತಃ ಬಿಹಾರನವರಾಗಿದ್ದು, ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಗರದ ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯೊಂದರಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದರು.
ಮಂಗಳವಾರ ರಾತ್ರಿಯಿಂದ ಶಕೀಲ್ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಗುರುವಾರ ಶಕೀಲ್ ಅವರ ಸಹೋದರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲು ಮಾಡಿದ್ದರು. ಭಾನುವಾರ ಬೆಳಗ್ಗೆ ಮಾರ್ಟಿನ್ ಎಂಬುವವರ ನಿವೇಶನದ ಶೌಚಗುಂಡಿಯಲ್ಲಿ ಮೂಟೆ ಕಟ್ಟಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಘಟನೆ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಶೌಚಗುಂಡಿಯಲ್ಲಿ ಪತ್ತೆಯಾದ ಶವ ಸೈಫಿ ಅವರದ್ದೇ ಎಂದು ಸೈಫಿ ಸಹೋದರ ಖಚಿತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದಲ್ಲಿ 16,500 ವೈದ್ಯಕೀಯ ಸಿಬ್ಬಂದಿ ಕೊರತೆ: ವರದಿ
ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ 201 (ಅಪರಾಧದ ಸಾಕ್ಷ್ಯಾಧಾರಗಳು ನಾಪತ್ತೆ) ಮತ್ತು 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.