- ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ
- ಪಕ್ಷ ಕುಟುಂಬದ ಸ್ವತ್ತಲ್ಲ, ಜೆಡಿಎಸ್‌ನದ್ದು ಜಾತ್ಯತೀತ ಸಿದ್ಧಾಂತ: ಇಬ್ರಾಹಿಂ
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ. ನಾನೇ ಅದರ ಅಧ್ಯಕ್ಷ. ಇದು ನನ್ನ ಮನೆ. ಮುಂದೇನಾಗುತ್ತದೆ ಎಂಬುದನ್ನು ಪರದೆ ಮೇಲೆ ನೋಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸವಾಲು ಹಾಕುವ ರೀತಿ ಮಾತನಾಡಿದರು.
ಜೆಡಿಎಸ್ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ ಅವರು, “ನಿತೀಶ್ ಕುಮಾರ್, ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್‌ನವರೂ ನನ್ನ ಜೊತೆ ಮಾತನಾಡಿದ್ದಾರೆ. ಸಭೆಯ ಚರ್ಚೆಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ತಿಳಿಸುತ್ತೇನೆ. ಹೊಸ ಸಮಿತಿ ರಚನೆ ಮಾಡಿ, ಅದರ ಸಭೆ ಕರೆಯುತ್ತೇನೆ. ನಂತರ ಮುಂದಿನ ತೀರ್ಮಾನ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ಹೇಳಿದರು.
“ನನ್ನನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಪಕ್ಷ ಕುಟುಂಬದ ಸ್ವತ್ತಲ್ಲ. ಜೆಡಿಎಸ್ ಪಕ್ಷದ್ದು ಜಾತ್ಯತೀತ ಸಿದ್ಧಾಂತ. ಬಿಜೆಪಿ ಸಿದ್ಧಾಂತವೇ ಬೇರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಸೋಲಬೇಕಿದೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ” ಎಂದು ಎಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಯಾವ ಕಾರಣಕ್ಕೂ ಎನ್ ಡಿ ಎ ಜೊತೆಗೆ ಹೋಗಲ್ಲ. 19 ಜನ ಶಾಸಕರ ಜೊತೆಗೆ ನಾನೇ ಮಾತನಾಡುತ್ತೇನೆ. ಒಕ್ಕಲಿಗರು ಕೂಡ ಕೈಬಿಟ್ಟಿದ್ದಾರೆ. ಮುಸ್ಲಿಮರನ್ನು ನಂಬಿ ರಾಜಕೀಯ ಮಾಡಿಲ್ಲ ಅಂತಾರೆ. ಆದರೆ ಯಾರನ್ನು ನಂಬಿ ರಾಜಕೀಯ ಮಾಡಿದ್ದರೋ ಅವರೇ ಕೈ ಬಿಟ್ಟರು” ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ವ್ಯಾಖ್ಯಾನ ಬದಲಿಸಿದ ಕಾಂಚಾಣ
“ಎಚ್ ಡಿ ಕುಮಾರಸ್ವಾಮಿ ಅವರು ಯಾರ ಅಭಿಪ್ರಾಯ ಕೇಳಿ ಮೈತ್ರಿ ಮಾಡಿಕೊಂಡಿದ್ದಾರೆ? ಏಕಾಏಕಿ ದೆಹಲಿಗೆ ಹೋಗಿ ಅಮಿತ್ ಶಾ ಜೊತೆಗೆ ಫೋಟೋ ತೆಗೆಸಿ ಮೈತ್ರಿ ಘೋಷಣೆ ಮಾಡಿದ್ದಾರೆ. ಜೆಡಿಎಸ್ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತದಲ್ಲಿ ನಂಬಿಕೆ ಇಟ್ಟ ಪಕ್ಷ. ನಾವು ಅಲ್ಲಿ ಹೋಗೋದು ಅಲ್ಲ ಅವರು ಇಲ್ಲಿ ಬರಲಿ” ಎಂದರು.
“ಬಿಜೆಪಿಯವರು ಎನ್‌ಆರ್‌ಸಿ, ಮುಸ್ಲಿಂ ಪರ್ಸನಲ್ ಲಾ ಕೈ ಹಾಕಲ್ಲ ಎಂದು ಭರವಸೆ ಕೊಡುತ್ತಾರಾ? ನಾನಂತೂ ಮೈತ್ರಿ ಒಪ್ಪಲ್ಲ. ಕುಮಾರಸ್ವಾಮಿ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಮೈತ್ರಿಯ ಬಗ್ಗೆ ಪಕ್ಷದಲ್ಲಿ ಸಭೆ ಆಗಿದೆಯಾ? ಎಂಎಲ್‌ಎಗಳು ಒಪ್ಪಿದ್ದಾರಾ? ದೇವೇಗೌಡರ ಜೊತೆಗೆ ಮಾತನಾಡುವೆ” ಎಂದು ಹೇಳಿದರು.
”ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ ತತ್ವ ಸಿದ್ಧಾಂತ ಬೇರೆ ಇದೆ, ಅದಕ್ಕೆ ನಾವು ವಿರೋಧ ಮಾಡುತ್ತೇವೆ. ನಾನು ಹೆದರುವನು ಅಲ್ಲ, ಬೆದರಿಕೆ ಹಾಕುವವನೂ ಅಲ್ಲ” ಎಂದು ಸ್ಪಷ್ಟಪಡಿಸಿದರು.
“ದೇವೇಗೌಡರು ನಮ್ಮ ರಾಷ್ಟ್ರದ ನಾಯಕರು, ತಂದೆಯ ಸಮಾನ. ಅವರ ಮನಸ್ಸಿನಲ್ಲಿ ನೋವಿದೆ. ಆದರೆ ಸ್ವಯಂ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈಗಲೂ ಅವಕಾಶ ಇದೆ, ಅವರ ಜೊತೆ ಹೋಗಲ್ಲ ಎಂದು ವಾಪಸ್ ಬಂದರೆ ಹೀರೋ ಆಗುತ್ತಾರೆ” ಎಂದರು.
ಚಿಂತನ ಮಂಥನ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಜೆ ಎಚ್ ಪಟೇಲ್ ಪುತ್ರ ಹಾಗೂ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ ಪಟೇಲ್ ಅವರು, ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಆದಾಗ ನಮಗೂ ಆಹ್ವಾನಿಸಿದ್ದರು. ಆದರೆ ನೀವು ಸ್ವಲ್ಪ ಸಮಯ ಅಲ್ಲೇ ಇರಿ ಎಂದಿದ್ದೆ. ಇವಾಗ ಮತ್ತೆ ಜೊತೆಗೆ ಸೇರುವಂತಹ ಸಮಯ ಬಂದಿದೆ ಎಂದು ಪರೋಕ್ಷವಾಗಿ ಸಿಎಂ ಇಬ್ರಾಹಿಂ ಜೆಡಿಯು ಸೇರ್ಪಡೆ ಆಗುವ ಸುಳಿವು ನೀಡಿದರು. ಆದರೆ, ಅಧಿಕೃತವಾಗಿ ಇಬ್ರಾಹಿಂ ಅವರು ಇಂತಹದ್ದೇ ಪಕ್ಷ ಸೇರುತ್ತೇನೆ ಎಂದು ಈವರೆಗೂ ಸ್ಪಷ್ಟಪಡಿಸಿಲ್ಲ.